ತ್ಯಾಜ್ಯ ಸಂಗ್ರಹಕ್ಕಾಗಿ ಉಡುಪಿ ಜಿಪಂಗೆ 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಹಸ್ತಾಂತರ

ಉಡುಪಿ, ಡಿ.19: ಉಡುಪಿಯ ಐಟಿ ಕಂಪನಿ ರೋಬೋಸೋಫ್ಟ್ ಟೆಕ್ನಾಲಜೀಸ್ ಇದರ ಸಿಎಸ್‌ಆರ್ ಕಾರ್ಯಕ್ರಮದ ಅಡಿಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ಗೆ ತ್ಯಾಜ್ಯ ಸಂಗ್ರಹಕ್ಕಾಗಿ ಬಳಸಲು 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಇಂದು ಟೆಕ್ನಾಲಜೀಸ್ ಕಂಪನಿಯ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.

ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರಿಗೆ ಈ ಎಲೆಕ್ನಿಕ್ ಆಟೋ ರಿಕ್ಷಾಗಳನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿತೇಜ ಬೊಮ್ಮಿರೆಡ್ಡಿಪಲ್ಲಿ ವಿದ್ಯುಕ್ತವಾಗಿ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ರೋಬೋ ಸೋಫ್ಟ್ ಸಂಸ್ಥೆ ಕೈಗೊಂಡಿರುವ ಹಲವಾರು ಸಾಮಾಜಿಕ ಕಾರ್ಯಕ್ರಮಗಳು ಶ್ಲಾಘನೀಯ. ಎಲೆಕ್ನಿಕ್ ಆಟೋ ರಿಕ್ಷಾ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಗೆ ತುಂಬಾ ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರತೀಕ್ ಬಾಯಲ್ ಮಾತನಾಡಿ, ಉಡುಪಿ ಜಿಲ್ಲೆಯು ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಆರ್ಥಿಕ ಚಟುವಟಿಕೆ ಯಾಗಿಸುವ ಮೂಲಕ ಯಶಸ್ಸು ಸಾಧಿಸಿದೆ. ರೋಬೋಸೋಫ್ಟ್ ಸಂಸ್ಥೆಯ ಸ್ವಚ್ಛತೆಯೇ ಸೇವೆ ಎಂಬ ಸಂಕಲ್ಪ ಮತ್ತು ಈ ನಿಟ್ಟಿನಲ್ಲಿ ಕಂಪನಿಯ ಪ್ರಯತ್ನ ಎಲ್ಲರಿಗೂ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರವಿತೇಜ ಬೊಮ್ಮಿರೆಡ್ಡಿಪಲ್ಲಿ ಮಾತನಾಡಿ, ರೋಬೋ ಸೋಫ್ಟ್ ಕಂಪನಿ ತಂತ್ರಜ್ಞಾನ ಅಭಿವೃದ್ಧಿಯ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಸಂಸ್ಥೆ ಕೈಗೊಂಡ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು ಮತ್ತು ಭವಿಷ್ಯದಲ್ಲಿ ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕರಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಂಪನಿ ಮಾತೃ ಸಂಸ್ಥೆ ಟೆಕ್ನೋಪ್ರೊ ಜಪಾನ್ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕಂಪನಿಯ ಉದ್ಯೋಗಿ ನಾಗೇಶ್ ದೊಂಡಿಯ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!