ಹದಗೆಟ್ಟ ಆಡಳಿತ ವ್ಯವಸ್ಥೆಯಿಂದ ಅಕ್ರಮ ಮರಳುಗಾರಿಕೆಗೆ ನಿರ್ಭೀತ ವಾತಾವರಣ ಸೃಷ್ಟಿ: ಕಿಶೋರ್ ಕುಂದಾಪುರ
ಉಡುಪಿ: ಜಿಲ್ಲೆಯಲ್ಲಿ ಸಕ್ರಮ ಮರಳುಗಾರಿಕೆಗೆ ಅನುಮತಿ ನೀಡಲು ಸರಕಾರ ಮೀನ ಮೇಷ ಎಣಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪುಡಾರಿಗಳು ಉಡುಪಿಯಲ್ಲಿ ಅಕ್ರಮ ಮರಳುಗಾರಿಕೆ ದಂಧೆಯಲ್ಲಿ ತೊಡಗಿದ್ದು, ಅನಧಿಕೃತ ಮರಳು ಸಾಗಾಟದ ವಾಹನ ಡಿಕ್ಕಿಯಾಗಿ ಓರ್ವ ಅಮಾಯಕ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿರುವುದು ವಿಷಾದನೀಯ.
ಹದಗೆಟ್ಟ ಆಡಳಿತ ವ್ಯವಸ್ಥೆಯಿಂದ ಅಕ್ರಮ ಮರಳುಗಾರಿಕೆಗೆ ನಿರ್ಭೀತ ವಾತಾವರಣ ಸೃಷ್ಟಿಯಾಗಿರುವುದು ಶೋಚನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ಯಾವುದೇ ಪರವಾನಿಗೆ ಇಲ್ಲದೆ ಇನ್ಶೂರೆನ್ಸ್ ದಾಖಲೆ ರಹಿತ ಅನಧಿಕೃತ ವಾಹನದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಪ್ರತಿ ಲೋಡಿಗೆ ಮೂರು ಪಟ್ಟು ದರವನ್ನು ವಸೂಲಿ ಮಾಡುತ್ತಿರುವ ಕಾಂಗ್ರೆಸ್ ಪುಡಾರಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕಿದ್ದ ಜಿಲ್ಲಾ ಪೊಲೀಸ್ ಇಲಾಖೆ ಯಾವುದೇ ದಿಟ್ಟ ಕ್ರಮವನ್ನು ಕೈಗೊಳ್ಳದಿರುವುದು ಸಂಶಯಕ್ಕೆಡೆ ಮಾಡಿದೆ. ಹಿಂದೆ ಜಿಲ್ಲೆಯಲ್ಲಿ ಲಾರಿ ಮಾಲಕರು ಪ್ರತಿಭಟನೆಯಲ್ಲಿ ತೊಡಗಿದ್ದಾಗ ರಸ್ತೆಯ ಬದಿಯಲ್ಲಿ ನಿಂತಿದ್ದ ಲಾರಿಗಳ ಮೇಲೆ ಕೇಸ್ ದಾಖಲಿಸಿ ದರ್ಪವನ್ನು ತೋರಿದ್ದ ಇಲಾಖೆ ಸದ್ರಿ ಪ್ರಕರಣದ ಬಗ್ಗೆ ಮೌನ ವಹಿಸಿರುವುದು ಸರಕಾರದ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ.
ಜಿಲ್ಲೆಯ ಶಾಸಕರ ಪ್ರಸ್ತಾವನೆ ಮತ್ತು ಮನವಿಯ ಮೇರೆಗೆ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸುವಂತೆ ಗಣಿ ಇಲಾಖಾ ಸಚಿವರು ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಡಳಿತ ಸೂಕ್ತ ಮಾರ್ಗೋಪಾಯಗಳ ಮೂಲಕ ಜಿಲ್ಲೆಗೆ ಸರಳ ಮರಳುಗಾರಿಕೆ ನೀತಿಯನ್ನು ರೂಪಿಸುವತ್ತ ಅಗತ್ಯ ಕ್ರಮ ವಹಿಸಬೇಕಾಗಿದೆ.
ಅಕ್ರಮ ಮರಳು ದಂಧೆಯ ವಾಹನದಿಂದ ಮೃತಪಟ್ಟಿರುವ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನು ನೀಡಬೇಕು. ಅಕ್ರಮ ಮರಳುಗಾರಿಕೆಯ ಮೂಲವನ್ನು ಭೇಧಿಸಿ, ಅಕ್ರಮ ಮರಳು ಸಂಗ್ರಹವನ್ನು ಮುಟ್ಟುಗೋಲು ಹಾಕಿ, ಅಕ್ರಮ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕಾನೂನಾತ್ಮಕ ಕಠಿಣ ಕ್ರಮವನ್ನು ಜರಗಿಸುವ ಮೂಲಕ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ದಂಧೆಗೆ ಕಡಿವಾಣ ಹಾಕುವ ಜೊತೆಗೆ ಜಿಲ್ಲೆಯಲ್ಲಿ ಸರಳ ಮರಳುಗಾರಿಕೆ ನೀತಿಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಗಣಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆ ಮೂಲಕ ಅಗ್ರಹಿಸಿದ್ದಾರೆ.