ಉಡುಪಿ ವಕೀಲರ ಸಂಘ: ಡಿ.21 ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರ
ಉಡುಪಿ: ಉಡುಪಿ ವಕೀಲರ ಸಂಘವು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ಡಿ.21 ರಂದು ಉಡುಪಿಯ ನ್ಯಾಯಾಲಯ ಆವರಣದಲ್ಲಿ ನ್ಯಾಯವಾದಿಗಳು, ನ್ಯಾಯಾಧೀಶರು ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಅದರ ಉದ್ಘಾಟನಾ ಕಾರ್ಯಕ್ರಮವು ಅಂದು ಬೆಳಿಗ್ಗೆ 9.30 ಗಂಟೆಗೆ ನಡೆಯಲಿರುವುದು.
ಉಡುಪಿ ವಕೀಲರ ಸಂಘದ ಸದಸ್ಯರಿಗಾಗಿ ಕಸ್ತೂರ್ಬಾ ಆಸ್ಪತ್ರೆಯಿಂದ ಕೊಡಮಾಡಿದ ವಿಶೇಷ ಆರೋಗ್ಯ ಕಾರ್ಡ್ “ಉಡುಪಿ ಲಾಯರ್ಸ್ ಪ್ರಿವಿಲೆಜ್ ಕಾರ್ಡ್’ನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಇವರು ಉದ್ಘಾಟಿಸಲಿದ್ದು, ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಅಧ್ಯಕ್ಷತೆ ವಹಿಸಲಿರುವರು. ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಶಿಬಿರದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ನುರಿತ ವೈದ್ಯರಿಂದ ಹೃದಯ, ಜನರಲ್ ಮೆಡಿಸಿನ್,ಕಿವಿ-ಮೂಗು ಗಂಟಲು, ಫಿಸಿಯೋಥೆರಫಿ, ಸ್ತ್ರೀ ರೋಗ, ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವಿಕೆ, ಎಲುಬು, ಚರ್ಮ, ಕಣ್ಣು, ಹಲ್ಲು, ರಕ್ತದ ಒತ್ತಡ ಮತ್ತು ಮಧುಮೇಹ ಇತ್ಯಾದಿಗಳ ಉಚಿತ ತಪಾಸಣೆ ಹಾಗೂ ರಕ್ತದ ವರ್ಗೀಕರಣ ನಡೆಯಲಿರುವುದು. ಅಲ್ಲದೆ ಬೃಹತ್ ರಕ್ತದಾನ ಕಾರ್ಯಕ್ರಮವೂ ನಡೆಯಲಿರುವುದು ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ತಿಳಿಸಿದ್ದಾರೆ.