ಬ್ರಹ್ಮಾವರ: ಟ್ರಸ್ಟ್ ನ 50ಲಕ್ಷ ರೂ. ದುರುಪಯೋಗ – ದೂರು ದಾಖಲು

ಬ್ರಹ್ಮಾವರ, ಡಿ.18: ಬಸ್ರೂರು ಟಿಪ್ ಸೆಷನ್ಸ್ ಚಾರಿಟಬಲ್ ಟ್ರಸ್ಟ್‌ನ ಲಕ್ಷಾಂತರ ರೂ. ಹಣ ದುರುಪಯೋಗ ಪಡಿಸಿ ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ರೂರು ಟಿಪ್ ಸೆಷನ್ಸ್ ಚಾರಿಟಬಲ್ ಟ್ರಸ್ಟ್ ಸಂಸ್ಥೆಯ ಮೇಲ್ವಿಚಾರಕಿ ವಿಜಯಲಕ್ಷ್ಮೀ ಹಾಗೂ ಸುಮತಿ ಎಂಬವರು ಇತರರೊಂದಿಗೆ ಸೇರಿಕೊಂಡು ಬ್ರಹ್ಮಾವರ ತಾಲೂಕು ವಾರಂಬಳ್ಳಿ, ಹಾರಾಡಿ ಮತ್ತು ಬೈಂದೂರು ತಾಲೂಕಿನ ಕೊಲ್ಲೂರು, ಕುಂದಾಪುರ ತಾಲೂಕಿನ ಗಂಗೊಳ್ಳಿ ಹಾಗೂ ತಲ್ಲೂರು, ಹೊಂಬಾಡಿ, ಕಾರ್ಕಳ ಪುರಸಭಾ ವ್ಯಾಪ್ತಿಯ ಘಟಕಗಳಲ್ಲಿ ಸಂಗ್ರಹಿಸಿದ್ದ ಸಂಸ್ಥೆಗೆ ಸಂಬಂಧಿಸಿದ ಒಟ್ಟು 50ಲಕ್ಷ ರೂ. ಗೂ ಹೆಚ್ಚಿನ ಬೆಲೆ ಬಾಳುವ ಮರುಬಳಕೆ ಆಗುವ ಪ್ಲಾಸ್ಟಿಕ್ ಮತ್ತು ಇತರ ಸೊತ್ತುಗಳನ್ನು 2020ರಿಂದ 2024ರ ಅವಧಿಯಲ್ಲಿ ಮಾರಾಟ ಮಾಡಿದ್ದರು.

ಈ ಸ್ಥಳಗಳಲ್ಲಿ ಹಾಕಿರುವ ಸಿಸಿ ಕ್ಯಾಮರಗಳನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸಿರುವ ಆರೋಪಿಗಳು, ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಮತ್ತು ಪ್ರಕಟಣೆ ನೀಡಿ ಸಂಸ್ಥೆಯ ಮೊಹರು, ಬಿಲ್ಲು, ಪುಸ್ತಕಗಳನ್ನು ಬಳಸಿ ಸಂಸ್ಥೆಯ ಗ್ರಾಹಕರಿಂದ ಸಾಮಾಗ್ರಿಗಳನ್ನು ಸಂಗ್ರಹಿಸಿ ಅವುಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಮಾರಾಟ ಮಾಡಿ ಸಂಸ್ಥೆಗೆ ಮೋಸ, ವಂಚನೆ, ವಿಶ್ವಾಸಘಾತಕ ಕೃತ್ಯವೆಸಗಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

error: Content is protected !!