ಅಂಬಲಪಾಡಿ ಹೆದ್ದಾರಿ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ವಿರೋಧ ಇಲ್ಲ: ಕೀರ್ತಿ ಶೆಟ್ಟಿ ಅಂಬಲಪಾಡಿ
ಉಡುಪಿ: ಕೆಲವು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಜನ ವಿರೋಧಿ ಪಕ್ಷ , ಅಭಿವೃದ್ದಿ ವಿರೋಧಿ ಪಕ್ಷ ಎಂಬ ಪೋಸ್ಟಿಂಗ್ ಬರುತ್ತಿದ್ದು ಅದು ಸತ್ಯಕ್ಕೆ ದೂರವಾದ ಸುಳ್ಳು ಸುದ್ದಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ಅಂಬಲಪಾಡಿ ಹೆದ್ದಾರಿ ಹೋರಾಟ ಸಮಿತಿಯ ಕೀರ್ತಿ ಶೆಟ್ಟಿ ಅಂಬಲಪಾಡಿ ಸ್ಪಷ್ಟಪಡಿಸಿದ್ದಾರೆ .
ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕರು, ವಾಹನ ಸವಾರರು ಅಂಬಲಪಾಡಿ ಹೆದ್ದಾರಿ ವೃತ್ತದಲ್ಲಿ ಅನುಭವಿಸುವ ತೊಂದರೆ , ಅಪಘಾತ , ಜೀವ ಹಾನಿ ಮುಂತಾದ ದಿನನಿತ್ಯ ನಡೆಯುವ ದುರ್ಘಟನೆಗಳನ್ನು ಪ್ರತ್ಯಕ್ಷವಾಗಿ ನೋಡಿದ ನಾವು ನಿರಂತರವಾಗಿ ಇಲ್ಲಿ ಫ್ಲೈ ಓವರ್ ರಸ್ತೆಯ ನಿರ್ಮಾಣಕ್ಕೆ ಒತ್ತಾಯ ಮಾಡಿದ್ದು ಅದು ಈಗ ಕಾರ್ಯರೂಪಕ್ಕೆ ಬಂದಿದೆ.
ಕೆಲವು ಸ್ಥಾಪಿತ ಹಿತಾಸಕ್ತಿಗಳು ತಮ್ಮ ಸ್ವಯಂ ಲಾಭಕ್ಕೆ ಕೆಲವು ರಾಜಕೀಯ ಮುಖಂಡರನ್ನು ಛೂಬಿಟ್ಟು ಕಾಮಗಾರಿಗೆ ತಡೆ ಒಡ್ಡುವುದನ್ನು ಹೆದ್ದಾರಿ ಅಭಿವೃದ್ಧಿ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಯಾವುದೇ ಬೆದರಿಕೆಗೆ ಮಣಿಯದೆ ಸಾರ್ವಜನಿಕರ ಅನುಕೂಲಕ್ಕೆ ಈಗ ನಿರ್ಮಾಣ ಪ್ರಾರಂಭ ಆಗಿರುವ ಕಾಮಗಾರಿ ಭರದಿಂದ ಸಾಗುವ ನಿಟ್ಟಿನಲ್ಲಿ ಸ್ಥಳೀಯರ ನೆಲೆಯಲ್ಲಿ ನಾವು ಸರಕಾರದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿ ಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ .
ಅತೀ ವೇಗವಾಗಿ ಈಗ ನಡೆಯುತ್ತಿರುವ ಕಾಮಗಾರಿ ಒಂದು ವೇಳೆ ಸ್ತಗಿತಗೊಂಡರೆ ಅದರಿಂದ ನಿತ್ಯ ಸಂಚರಿಸುವ ಸಾವಿರಾರು ವಾಹನಗಳು, ಸ್ಥಳೀಯರು , ಪಕ್ಕದ ಅಂಗಡಿ ಮತ್ತು ಇತರ ವಹಿವಾಟು ಮಾಡುವವರು ದೀರ್ಘ ಕಾಲದ ತೊಂದರೆ ಅನುಭವಿಸುವ ಗಂಭೀರ ಸಮಸ್ಯೆ ಎದುರಾಗಲಿದೆ. ಆದುದರಿಂದ ಸಾರ್ವಜನಿಕರು ಮತ್ತು ಸ್ಥಳೀಯರು ಈಗ ನಡೆಯುವ ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡಿ ಇಲಾಖೆಯು ನಿರ್ಧಿಷ್ಟ ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸುವಲ್ಲಿ ತಮ್ಮ ಸಹಕಾರ ನೀಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.