ಜ.10: ಬಹ್ರೇನ್‌ನಲ್ಲಿ “NRI ಪೋರಮ್ ಕರ್ನಾಟಕ- ಬಹ್ರೇನ್” ಉದ್ಘಾಟನೆ
ಉಡುಪಿ: ಕರ್ನಾಟಕ ಸರ್ಕಾರದೊಂದಿಗೆ ಹೊಸದಾಗಿ ಸ್ಥಾಪಿಸಲಾದ ಮತ್ತು ಕರ್ನಾಟಕ ಸರ್ಕಾರ-ನೋಂದಾಯಿತ ಘಟಕ “ಎನ್ ಆರ್ ಐ ಪೋರಮ್ ಕರ್ನಾಟಕ- ಬಹ್ರೇನ್” (NEKB) ಜನವರಿ 10ರಂದು ಬಹ್ರೇನ್ ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಎನ್ ಆರ್ ಐ ಪೋರಮ್ ಕರ್ನಾಟಕ- ಬಹ್ರೇನ್ ಅಧ್ಯಕ್ಷ ರಾಜಕುಮಾರ್ ತಿಳಿಸಿದರು.
ಈ ಕುರಿತು ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಹ್ರೇನ್ ಇಂಡಿಯನ್ ಕ್ಲಬ್ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಸಾಂಸ್ಕೃತಿಕ ಸಚಿವ ಶಿವರಾಜ್ ತಂಗಡಗಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಆರತಿ ಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಬಹ್ರೇನ್ ನಲ್ಲಿ ಕರ್ನಾಟಕದ ಜನರ ನಡುವೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಬಂಧಗಳನ್ನು ಬೆಳೆಸಲು ನಮ್ಮ ವೇದಿಕೆ ಬದ್ಧವಾಗಿದೆ. ಬಹ್ರೇನ್ ನಲ್ಲಿ ಕನ್ನಡಿಗರಿಗೆ ತೊಡಗಿಸಿಕೊಳ್ಳಲು ಮತ್ತು ಸಂಪರ್ಕಿಸಲು ಅರ್ಥಪೂರ್ಣ ವೇದಿಕೆಗಳನ್ನು ಸೃಷ್ಟಿಸಲಿದೆ. ನಾವು ವಿವಿಧ ಚಟುವಟಿಕೆಗಳ ಮೂಲಕ ರಾಜ್ಯದಲ್ಲಿರುವ 25000 ಕನ್ನಡಿಗರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿದ್ದೇವೆ. ಕನ್ನಡಿಗರಹಿತಾಸಕ್ತಿಯನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರ, ಭಾರತೀಯ ರಾಯಭಾರ ಕಚೇರಿ ಮತ್ತು ಇತರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರೋಶನ್ ಲೂಯಿಸ್, ಸದಸ್ಯರಾದ ಉದಯ್ ಶೆಟ್ಟಿ, ಜಯ ಶೆಟ್ಟಿ, ಉದ್ಯಮಿ ದಿವಾಕರ್ ಸನಿಲ್ ಇದ್ದರು.