ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಿಬ್ಬಂದಿ ನೇಮಕಕ್ಕೆ ಶಾಸಕ ಯಶ್‌ಪಾಲ್ ಮನವಿ

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಿಬ್ಬಂದಿ ಕೊರತೆಯಿಂದ ಕಡತಗಳ ವಿಲೇವಾರಿ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಹೆಚ್ಚುವರಿ ಹುದ್ದೆ ಮಂಜೂರು ಹಾಗೂ ಉಡುಪಿ ನಗರದ ವಿವಿಧ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರವರನ್ನು ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಭೇಟಿಯಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮನವಿ ಮಾಡಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ತೀವ್ರ ಕೊರತೆಯಿಂದಾಗಿ ಸಾವಿರಕ್ಕೂ ಅಧಿಕ ಹಾಗೂ ಹಲವಾರು ತಿಂಗಳುಗಳ ಹಳೆಯ ಕಡತಗಳೂ ಅನುಮೋದನೆಗೆ ಬಾಕಿ ಉಳಿದಿರುತ್ತದೆ. ಪ್ರತಿ ತಿಂಗಳು ಸುಮಾರು 250 ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತಗೊಳ್ಳುತ್ತಿದ್ದು, ಭೂ ಪರಿವರ್ತನೆಗೆ ನಿರಾಕ್ಷೇಪಣಾ ಪತ್ರ, ನಿವೇಶನ ವಿನ್ಯಾಸ ಅನುಮೋದನೆ ಮತ್ತು ಮನೆ ನಿರ್ಮಾಣದ ತಾಂತ್ರಿಕ ಅಭಿಪ್ರಾಯಕ್ಕಾಗಿ ಸಾರ್ವಜನಿಕರು ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಸಿಬ್ಬಂದಿ ಮಂಜೂರಾತಿಗೆ ಮತ್ತು ಖಾಲಿಯಿರುವ ಹುದ್ದೆಗಳ ಭರ್ತಿಗೆ ಸಲ್ಲಿಸಿದ ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ ನೀಡುವಂತೆ ಸಚಿವರಲ್ಲಿ ಕೋರಲಾಯಿತು.

ಉಡುಪಿ ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಉಡುಪಿ ವಿಧಾನಸಭಾ ಕ್ಷೇತ್ರದ ವಿವಿಧ ಮೂಲಭೂತ ಸೌಲಭ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಮಣಿಪಾಲದ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಬೇಡಿಕೆಯಂತೆ ಶಿವಳ್ಳಿ ಕೈಗಾರಿಕಾ ವಲಯದ ರಸ್ತೆ, ಚರಂಡಿ, ದಾರಿದೀಪ ಸಹಿತ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಸುಮಾರು 30 ಕೋಟಿ ಅನುದಾನ ಒದಗಿಸುವಂತೆ ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿರುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಮತ್ತು ಹುದ್ದೆಗಳ ಮಂಜೂರಾತಿಗೆ ಅಗತ್ಯ ಕ್ರಮ ವಹಿಸುವಂತೆ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಿದರು ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!