ಅಂಬಲಪಾಡಿ: ಮೇಲ್ಸೇತುವೆ ಹಾಗೂ ಅಂಡರ್ಪಾಸ್ ಕಾಮಗಾರಿಗೆ ಚಾಲನೆ
ಉಡುಪಿ, ಡಿ16(ಉಡುಪಿ ಟೈಮ್ಸ್ ವರದಿ): ರಾಷ್ಟ್ರೀಯ ಹೆದ್ದಾರಿ ಅಂಬಲಪಾಡಿಯಲ್ಲಿ ಮೇಲ್ಸೇತುವೆ ಹಾಗೂ ಅಂಡರ್ಪಾಸ್ ಕಾಮಗಾರಿಗೆ ಅಧಿಕಾರಿಗಳು ತಿಳಿಸಿದಂತೆ ಇಂದಿನಿಂದಲೇ ಚಾಲನೆ ಸಿಕ್ಕಿದೆ.
ಸುಮಾರು 1.2 ಕಿ.ಮೀ ಉದ್ದದ, 23.53 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯಲಿದೆ. 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶನಿವಾರ ವಸಂತ ಮಂಟಪದಲ್ಲಿ ನಡೆದ ಅಂಬಲಪಾಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತ ಸಾರ್ವಜನಿಕ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಬದಲಿ ವ್ಯವಸ್ಥೆ ಬಗ್ಗೆ ನೋಟೀಫಿಕೇಶನ್ ನೀಡದ ಜಿಲ್ಲಾಡಳಿತ: ಈಗಾಗಲೇ ಅಂಬಾಲ್ಪಡಿ ಜಂಕ್ಷನ್ ಎರಡು ಬದಿಯಲ್ಲಿ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿರ್ಬಂಧಿಸಿದ್ದಾರೆ. ಆದರೇ, ಸಾರ್ವಜನಿಕರು ಬದಲಿ ವ್ಯವಸ್ಥೆ ಬಗ್ಗೆ ಗೊಂದಲದಲ್ಲಿದ್ದು, ಅಂಬಲಪಾಡಿ ಹಾಗೂ ಬ್ರಹ್ಮಗಿರಿ ಸಂಪರ್ಕಿಸುವ ಬದಲಿ ವ್ಯವಸ್ಥೆ ಬಗ್ಗೆ ಯಾವುದೇ ಸೂಚನೆಗಳನ್ನು ನೀಡದ ಕಾರಣ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
ಬ್ರಹ್ಮಗಿರಿಯಿಂದ ಅಂಬಲಪಾಡಿ ಕ್ರಾಸ್ ಆಗುವ ಬದಲಿ ವ್ಯವಸ್ಥೆಯ ಬಗ್ಗೆ ಯಾವುದೇ ಸೂಚನೆಗಳನ್ನು ನೀಡದ ಕಾರಣ ಬೆಳಿಗ್ಗೆ ಮತ್ತು ಸಂಜೆ ಸಮಯ ವಾಹನದಟ್ಟಣೆ ಹೆಚ್ಚಾಗಿ ಸವಾರರಿಗೆ ತೀವ್ರ ತೊಂದರೆಯಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.