ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ: ಶತಚಂಡಿಕಾಯಾಗ- ಬ್ರಹ್ಮಮಂಡಲ ಸಂಪನ್ನ
ಉಡುಪಿ, ಡಿ.14: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವತಿಯಿಂದ ಶತಚಂಡಿಕಾಯಾಗ ಹಾಗೂ ಬ್ರಹ್ಮಮಂಡಲ ಸೇವೆ ಶನಿವಾರ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಗಮ ಶಾಸ್ತ್ರಜ್ಞರು, ಬ್ರಹ್ಮಶ್ರೀ ವೇದಮೂರ್ತಿಗಳು, ಪ್ರಸಿದ್ಧ ತಂತ್ರಿಗಳು ಸಹಿತ 500 ಮಂದಿ ಪುರೋಹಿತರು ಧಾರ್ಮಿಕ ಕಾರ್ಯಕ್ರಮ ನಡೆಸಿದರು. 21 ಬಗೆಯ ದ್ರವ್ಯಗಳನ್ನೊಳಗೊಂಡ ಗುಡಾನ್ನ 35 ಬಗೆಯ ಇನ್ನಿತರ ವಸ್ತು, ಐದು ರೇಷ್ಮೆ ಸೀರೆ, ನೂರಾರು ರವಿಕೆ ಕಣಗಳನ್ನು ಮಂತ್ರದೊಂದಿಗೆ ಅಹುತಿ ನೀಡಲಾಯಿತು. ಶತಚಂಡಿಕಾ ಯಾಗದಲ್ಲಿ 150ಕ್ಕೂ ಹೆಚ್ಚಿನ ಸೇವಾಕರ್ತರು ಸಂಕಲ್ಪ ಮಾಡಿ ಪೂರ್ಣಾಹುತಿಗೆ ಪರಿಕರಗಳನ್ನು ಸಮರ್ಪಿಸಿದರು.
ಸುಮಾರು 25 ಸಾವಿರಕ್ಕಿಂತಲೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದರು. ಸುಮಾರು 20 ಸಾವಿರ ಮಂದಿ ಭಕ್ತರು ದೇವರ ಅನ್ನಪ್ರಸಾದ ಸ್ವೀಕರಿಸಿದರು. ಸಾವಿರಾರು ಮಹಿಳೆಯರು ದುರ್ಗಾರತಿಯಲ್ಲಿ ಭಾಗವಹಿಸಿ ಪುನೀತರಾದರು.
ಶತಚಂಡಿಕಾಯಾಗ ಹಾಗೂ ಬ್ರಹ್ಮ ಮಂಡಲ ಸೇವಾ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಕಾರ್ಯದರ್ಶಿ ಕೃಷ್ಣರಾವ್ ಕೊಡಂಚ, ದೇವಸ್ಥಾನದ ಆಡಳಿತ ಮೊಕ್ತಸರ ಮೋಹನ ಮುದ್ದಣ್ಣ ಶೆಟ್ಟಿ, ಆರ್ಥಿಕ ಸಮಿತಿ ಸಂಚಾಲಕ ರಮೇಶ್ ಶೆಟ್ಟಿ ಕಳತ್ತೂರು, ಆಡಳಿತ ಮಂಡಳಿ ಕಾರ್ಯದರ್ಶಿ ನಾರಾಯಣದಾಸ್, ಕೋಶಾಧಿಕಾರಿ ಸುದರ್ಶನ್ ಶೇರಿಗಾರ್ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ದೇವಿ ಸನ್ನಿಯಲ್ಲಿ ನಡೆಯುವ ಶತಚಂಡಿಕಾ ಯಾಗ, ಧಾರ್ಮಿಕ ಕಾರ್ಯಕ್ರಮಗಳಿಂದ ದೇವರು ಸಂತುಷ್ಠರಾಗಿ ರಾಕ್ಷಸರ ಸಂಹಾರಿಸಿ, ಸಜ್ಜನರ ರಕ್ಷಣೆಗೆ ಮುಂದಾಗುತ್ತಾಳೆ. ನಿರ್ಭೀತಿಯಿಂದ ಧರ್ಮ ಪರಿಪಾಲಿಸುವುದಕ್ಕೆ ಹಾರೈಸುತ್ತಾಳೆ ಎಂದು ಭಾವೀ ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಅವರು ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನದ ಶತಚಂಡಿಕಾ ಯಾಗ ಹಾಗೂ ಬ್ರಹ್ಮಮಂಡಲ ಸೇವೆಯ ಅಂಗವಾಗಿ ದೇವಳ ಆವರಣದಲ್ಲಿ ಶನಿವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ಸಜ್ಜನರ ರಕ್ಷಣೆಗೆ ಶತ್ರುಗಳ ಸಂಹಾರ ಅವಶ್ಯವಿದೆ. ದೇವಿ ಹೊರಗಿನ ಶಕ್ತಿಗಳನ್ನು ನಾಶ ಮಾಡಿದರೆ ಸಾಕಾಗುವುದಿಲ್ಲ. ನಮ್ಮೊಳಗಿನ ದುಷ್ಟಶಕ್ತಿಗಳನ್ನು ಸದೆಬಡಿಯುವ ಅಗತ್ಯವಿದೆ. ಕಲಿಯುಗದಲ್ಲಿ ದುರ್ಗಾ ದೇವಿ ಮತ್ತು ಗಣಪತಿ ಭಕ್ತರ ಪ್ರಾರ್ಥನೆಯನ್ನು ಶೀಘ್ರವೇ ಆಲಿಸಿ ಅನುಗ್ರಹಿಸುತ್ತಾರೆ. ಹೀಗಾಗಿ ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಸಲ್ಲಿಸುವ ಅಗತ್ಯವಿದೆ ಎಂದರು.
ಎಂ.ಆರ್.ಜೆ. ಗ್ರೂಪ್ ಬೆಂಗಳೂರು ಆಡಳಿತ ನಿರ್ದೇಶಕ ಡಾ.ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ದೇವರ ದಯೆ ಇಲ್ಲದೇ ಮನುಷ್ಯರು ಈ ಭೂಮಿ ಮೇಲೆ ಅರೆ ಕ್ಷಣವೂ ಬದುಕುವುದಕ್ಕೆ ಸಾಧ್ಯವಿಲ್ಲ. ದೈವಿಶಕ್ತಿ ಇದ್ದಾಗ ಮಾನವರ ಏಳಿಗೆ,ಅಭಿವೃದ್ಧಿ ಕಾಣುವುದಕ್ಕೆ ಸಾಧ್ಯವಿದೆ ಎಂದರು. ದೇವಳದ ಆಡಳಿತ ಮೊಕ್ತೇಸರ ಮೋಹನ ಮುದ್ದಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಂಬೈಯ ಅದಿತಿ ಇಂಟರ್ ನ್ಯಾಷನಲ್‌ನ ಭರತ್ ಎಂ. ಶೆಟ್ಟಿ, ಎಂ.ಆರ್.ಜೆ. ಗ್ರೂಪ್ ಬೆಂಗಳೂರು ಆಡಳಿತ ನಿರ್ದೇಶಕ ಡಾ.ಕೆ. ಪ್ರಕಾಶ್ ಶೆಟ್ಟಿ, ಮುಂಬೈಯ ಹೇರಂಭಾ ಇಂಡಸ್ಟಿçÃಸ್ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ದೇವಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ಭಕ್ತರು ಹಾಗೂ ಪ್ರಮುಖರನ್ನು ಗೌರವಿಸಲಾಯಿತು.
ಶಾಸಕರಾದ ಯಶಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.
ಉಜ್ವಲ್ ಡೆವಲರ‍್ಸ್ನ ಪುರುಷೋತ್ತಮ್ ಶೆಟ್ಟಿ, ಶಿಲಾಶಿಲಾ ತಂತ್ರಿಗಳಾದ ವಿದ್ವಾನ್ ಕೆ.ಎಸ್., ಕೃಷ್ಣಮೂರ್ತಿ ತಂತ್ರಿ, ಕೆ.ಎ. ಶ್ರೀರಮಣ ತಂತ್ರಿ, ಅರ್ಚಕ ವಾಸುದೇವ ಭಟ್, ನಗರಸಭಾ ಸದಸ್ಯ ಶ್ರೀಕೃಷ್ಣರಾವ್ ಕೊಡಂಚ, ಶ್ರೀಮಹಿಷಮರ್ದಿನಿ ದೇವಸ್ಥಾನ ಕಾರ್ಯದರ್ಶಿ ನಾರಾಯಣ ದಾಸ್ ಉಡುಪ, ಪುನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಉಪಸ್ಥಿತರಿದ್ದರು. ಶತಚಂಡಿಕಾಯಾಗ ಹಾಗೂ ಬ್ರಹ್ಮಮಂಡಲ ಸೇವಾ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.