ಬ್ರೇಕ್ ಫೇಲ್ ಆದ ಬಸ್ಸನ್ನು ನಿಯಂತ್ರಣಕ್ಕೆ ತಂದು ಹಲವು ಪ್ರಯಾಣಿಕರನ್ನು ರಕ್ಷಿಸಿದ ಚಾಲಕ
ಮಂಗಳೂರು: ಬ್ರೇಕ್ ಫೇಲ್ ಆದ ಬಸ್ಸನ್ನು ಕ್ಷಣಮಾತ್ರದಲ್ಲಿ ನಿಯಂತ್ರಣಕ್ಕೆ ಪಡೆದು ಪ್ರಯಾಣಿಸುತ್ತಿದ್ದ ಹಲವು ಪ್ರಯಾಣಿಕರನ್ನು ತಮ್ಮ ಸಮಯ ಪ್ರಜ್ಞೆಯಿಂದ ಖಾಸಗಿ ಬಸ್ ಚಾಲಕ ಅಪಾಯದಿಂದ ಪಾರು ಮಾಡಿದ ಘಟನೆ ಇಂದು ಬೆಳಗ್ಗೆ ಮಂಗಳೂರು ನಗರದ ಬಳ್ಳಾಲ್‌ಬಾಗ್‌ನಲ್ಲಿ ನಡೆದಿದೆ.
ಉಡುಪಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಿಶಾಲ್ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್ ಬೆಳಿಗ್ಗೆ 8 ಗಂಟೆ ಸಮಯಕ್ಕೆ ನಗರದ ಬಳ್ಳಾಲ್‌ಬಾಗ್‌ಗೆ ಆಗಮಿಸುತ್ತಲೇ ಬ್ರೇಕ್ ಫೇಲ್ ಆಗಿದ್ದು, ಕೂಡಲೇ ಎಚ್ಚೆತ್ತುಕೊಂಡ ಚಾಲಕ ಸಿದ್ದೀಕ್ ಎರ್ಮಾಳ್ ಸಮಯಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ಬಸ್‌ನ್ನು ಫುಟ್‌ಪಾತ್ ಮೇಲೇರಿಸಿ ಯಾವುದೇ ಅನಾಹುತವಾಗದಂತೆ ಪಾರು ಮಾಡಿದ್ದಾರೆ. ಬೆಳಿಗ್ಗೆ ಹೊತ್ತು ಆಗಿದ್ದರಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಬಸ್ ಚಾಲಕ ಸಿದ್ದೀಕ್ ಅವರು ತೋರಿದ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸದೇ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಸಿದ್ದೀಕ್ ಅವರ ಸಮಯಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಾಲತಾಣದಲ್ಲಿ ಚಾಲಕನ ಕುರಿತು ಪೋಸ್ಟ್ ಮಾಡಿ ಶ್ಲಾಘಿಸಿದ್ದಾರೆ.