ಬೈಂದೂರು ಶಾಸಕರು ಏಕಾಏಕಿ ಪ್ರತಿಭಟನೆಯ ಹಾದಿ ಹಿಡಿದಿರುವುದು ಸರಿಯಲ್ಲ- ಅರವಿಂದ್ ಪೂಜಾರಿ
ಬೈಂದೂರು: ಜಿಲ್ಲೆಯಲ್ಲಿ ಹಲವು ತಿಂಗಳಿನಿಂದ ಕೆಂಪು ಕಲ್ಲು ಗಣಿಗಾರಿಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಲಾರಿ ಮತ್ತು ಕೆಂಪುಕಲ್ಲು ಕೋರೆ ಮಾಲೀಕರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸಬೇಕು ಎಂದು ನಿರ್ಣಯಿಸಿ, ಡಿ. 7ರಂದು ಬೈಂದೂರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ, ಆದರೆ ಈ ಸಂದರ್ಭ ಶಾಸಕ ಗುರುರಾಜ ಗಂಟಿಹೊಳೆ ಅವರು ಈ ಹಿಂದೆ ನಡೆದ ಪೂರ್ವಬಾವಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬದ್ಧರಾಗದೆ ಪ್ರತಿಭಟನೆಯ ನೆಪದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕೆಂಪುಕಲ್ಲು ಗಣಿಗಾರಿಕೆ ಪುನರ್ ಆರಂಭಿಸುವ ಬಗ್ಗೆ ವಾರದ ಹಿಂದೆ ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹಾಗೂ ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ನೇತೃತ್ವದಲ್ಲಿ ಲಾರಿ ಮತ್ತು ಕೆಂಪುಕಲ್ಲು ಕೋರೆ ಮಾಲೀಕರ ಸಭೆ ನಡೆಸಲಾಗಿದ್ದು, ಆ ಸಭೆಯಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸಿದರೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು నిರ್ಣಿಯಸಿ ಡಿ.7 ರಂದು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. ಅದರಂತೆ ಆ ದಿನ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲು ಎಲ್ಲ ಪಕ್ಷದ ನಾಯಕರು ಪಕ್ಷಾತೀತವಾಗಿ ಬೈಂದೂರು ಸರ್ಕಲ್ ನಿಂದ ಮೆರವಣೆಗೆಯ ಮೂಲಕ ಆಡಳಿತ ಸೌಧಕ್ಕೆ ಸಾಗುತ್ತಿರುವಾಗ, ಶಾಸಕರು ತಮ್ಮ ಬೆಂಬಲಿಗ ರೊಂದಿಗೆ ಮಧ್ಯ ಪ್ರವೇಶಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಗೊಂದಲ ಏರ್ಪಟ್ಟಿದೆ. ಕಾನೂನಿನ ತೊಡಕಿನಿಂದಾಗಿ ಉಡುಪಿ ಜಿಲ್ಲೆಯಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿರು ವುದರಿಂದ ಮನವಿ ನೀಡಿ ಸಂಬಂಧಿಸಿದವರ ಗಮನ ಸೆಳೆಯಬೇಕು ಹೊರತು ಏಕಾಏಕಿ ಪ್ರತಿಭಟನೆಯ ಹಾದಿ ಹಿಡಿದಿರುವುದು ಸರಿಯಲ್ಲ ಎಂದರು.
ಗಣಿಗಾರಿಕೆ ಆರಂಭಕ್ಕೆ ಬದ್ಧ: ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆ ಪುನರ್ ಆರಂಭಿಸುವ ಬಗ್ಗೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಈಗಾಗಲೇ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು, ಬೆಳಗಾವಿ ಅಧಿ ವೇಶನದಲ್ಲಿ ವಿಜಯ್ ಶೆಟ್ಟಿ ಅವರ ನೇತೃತ್ವದ ಲಾರಿ ಮತ್ತು ಕೆಂಪುಕಲ್ಲು ಕೋರೆ ಮಾಲೀಕರ ನಿಯೋಗವನ್ನು ಗಣಿ ಸಚಿವ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿಸಿ, ಅವರಿಗೆ ಇಲ್ಲಿನ ಕೂಲಿ ಕಾರ್ಮಿಕರ ಸಂಕಷ್ಟದ ಬಗ್ಗೆ ಮನವರಿಕೆ ಮಾಡಿಸಿ, ಡಿ. 15ರೊಳಗೆ ಕೆಂಪುಕಲ್ಲು ಗಣಿಗಾರಿಕೆ ಪುನರ್ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಲಾರಿ ಮತ್ತು ಕೆಂಪುಕಲ್ಲು ಕೋರೆ ಮಾಲೀಕ ವಿಜಯ ಶೆಟ್ಟಿ, ಸದಾಶಿವ ಪಡುವರಿ, ನಾಗರಾಜ ಗಾಣಿಗ, ಜಗದೀಶ ದೇವಾಡಿಗ, ವೀರಭದ್ರ ಗಾಣಿಗ ಉಪಸ್ಥಿತರಿದ್ದರು.