ಅಂಬಲಪಾಡಿ ಜಂಕ್ಷನ್‌ನಲ್ಲಿ ಎಲಿವೇಟೆಡ್ ಪ್ಲೆ ಓವರ್ ನಿರ್ಮಾಣಕ್ಕೆ ಆಗ್ರಹ
ಉಡುಪಿ: ಉಡುಪಿ ಅಂಬಲಪಾಡಿಯ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮೋದನೆ ನೀಡಿರುವುದನ್ನು ಪುನರ್ ಪರಿಶೀಲಿಸಿ ಇಲ್ಲಿಗೆ ಸೂಕ್ತವಾದ ಎಲಿವೇಟೆಡ್ ಪ್ಲೆ ಓವರ್ ನಿರ್ಮಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆಗ್ರಹಿಸಿದ್ದಾರೆ.
ಉಡುಪಿ, ಕುಂದಾಪುರದಲ್ಲಿ ಈ ಹಿಂದೆ ನಿರ್ಮಿಸಲ್ಪಟ್ಟ ಅಂಡರ್‌ಪಾಸ್‌ನಿಂದ ಪ್ರಯಾಣಿಕರು, ಸಾರ್ವಜನಿಕರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಜೋರಾಗಿ ಮಳೆ ಬಂದ ಸಂದರ್ಭದಲ್ಲಿ ಅಂಡರ್‌ಪಾಸ್ ಸಂಪರ್ಕದ ಸರ್ವಿಸ್ ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಅಂಡರ್ ಪಾಸ್ ನಿರ್ಮಾಣಗೊಂಡಿರುವ ಪ್ರದೇಶದ ಎರಡು ಪಾರ್ಶ್ವಗಳು ಪರಸ್ಪರ ಗೋಚರಿಸುವುದಿಲ್ಲ.
ಇದೀಗ ಸಂತೆಕಟ್ಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಡರ್‌ಪಾಸ್ ಕಾಮಗಾರಿಯು ಕೂಡ ಅವೈಜ್ಞಾನಿಕ ವಾಗಿರುವುದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಎಲಿವೇಟೆಡ್ ಪ್ಲೆ ಓವರ್ ಇದು ಸಾರ್ವಜನಿಕರ ಹಲವಾರು ವರ್ಷಗಳ ಬೇಡಿಕೆಯಾಗಿದೆ.
ಅಂಡರ್ ಪಾಸ್ ನಿರ್ಮಾಣದಿಂದ ಆಗುವ ತೊಂದರೆಗಳು ಮತ್ತು ಎಲಿವೇಟೆಡ್ ಪ್ಲೆ ಓವರ್ ನಿರ್ಮಾಣದಿಂದ ಆಗುವ ಅನುಕೂಲತೆಗಳ ಬಗ್ಗೆ ಸರಿಯಾಗಿ ವಿಮರ್ಶೆ ಮಾಡಿಕೊಂಡು ಪ್ಲೆ ಓವರ್‌ಗಾಗಿ ನಿಸ್ವಾರ್ಥವಾಗಿ ಹೋರಾಟ ನಡೆಸುತ್ತಿರು ವವರು ಹಾಗೂ ಸಾರ್ವಜನಿಕರು ಎಲ್ಲರೂ ಒಗ್ಗೂಡಿ ಅಂಬಲಪಾಡಿ ಜಂಕ್ಷನ್‌ನಲ್ಲಿ ಎಲಿವೇಟೆಡ್ ಪ್ಲೆ ಓವರ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಕ್ಕೊರಲಿನಿಂದ ಆಗ್ರಹಿಸಬೇಕು ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.