ಬೈಕ್ ಅಪಘಾತ- ಕಾರು ರ್‍ಯಾಲಿಯ ನ್ಯಾಶನಲ್‌ ಚಾಂಪಿಯನ್‌ ವಿಧಿವಶ

ಕುಂದಾಪುರ: ಬೈಕ್‌ಗೆ ಗ್ಯಾಸ್‌ ಸಿಲಿಂಡರ್‌ ಸಾಗಾಟದ ಟಾಟಾ ಏಸ್‌ ವಾಹನ ಡಿಕ್ಕಿಯಾಗಿ ಬೈಕ್‌ ಚಲಾಯಿಸುತ್ತಿದ್ದ ಕಾರು ರೇಸ್‌ ಚಾಂಪಿಯನ್‌ ರಂಜಿತ್‌ ಬಲ್ಲಾಳ್‌ (54) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಸಂಭವಿಸಿದೆ.

ರಂಜಿತ್‌ ಬಲ್ಲಾಳ್‌ ಮಂಗಳೂರು ಮೂಲದ ಕೆ.ಬಿ. ಯುವರಾಜ ಬಲ್ಲಾಳ್‌ ಅವರ ಪುತ್ರ. ಇವರು ಕುಟುಂಬಸ್ಥರೊಂದಿಗೆ 3 ದಿನಗಳ ಹಿಂದೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ರಂಜಿತ್‌ ಅವರು ಬೈಕ್‌ನಲ್ಲಿ ಬರುತ್ತಿದ್ದರೆ, ಹಿಂದಿನಿಂದ ಮನೆಯವರೆಲ್ಲ ಕಾರಿನಲ್ಲಿ ಬರುತ್ತಿದ್ದರು. ಅರಾಟೆ ಸೇತುವೆಗಿಂತ ತುಸು ಹಿಂದೆ ಒಂದು ಸೇತುವೆಯಲ್ಲಿ ಸಂಚಾರ ನಿಷೇಧಿಸಿದ್ದರಿಂದ ಡೈವರ್ಶನ್‌ ನೀಡಿದ್ದು, ಅಲ್ಲಿ ಟಾಟಾ ಏಸ್‌ ಚಾಲಕ ಏಕಾಏಕಿ ನಿಧಾನ ಮಾಡಿದ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಬೈಕ್‌ ಟಾಟಾ ಏಸ್‌ ವಾಹನಕ್ಕೆ ಢಿಕ್ಕಿಯಾಯಿತು. ಪರಿಣಾಮ ಬೈಕ್‌ ಸವಾರ ರಂಜಿತ್‌ ಬಲ್ಲಾಳ್‌ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಸ್ಥಳಕ್ಕೆ ಗಂಗೊಳ್ಳಿ ಎಸ್‌ಐ ಹರೀಶ್‌ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಹೆದ್ದಾರಿಯ ಎರಡೂ ಕಡೆಯ ವಾಹನಗಳನ್ನು ಒಂದೇ ಸೇತುವೆಯಲ್ಲಿ ಬಿಡಲಾಗುತ್ತಿರುವುದರಿಂದ ಅಪಘಾತದ ಹಿನ್ನೆಲೆಯಲ್ಲಿ ಹೊಸ ಸೇತುವೆಯಲ್ಲಿ ಕೆಲ ಸಮಯ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ರಂಜಿತ್‌ ಕಾರು ರ್ಯಾಲಿಯಲ್ಲಿ ನ್ಯಾಶನಲ್‌ ಚಾಂಪಿಯನ್‌ ಆಗಿದ್ದರು. ಪ್ರತಿಭಾವಂತರಾಗಿದ್ದ ಅವರು ನೂರಕ್ಕೂ ಹೆಚ್ಚು ಟ್ರೋಫಿಗಳನ್ನು ಗೆದ್ದಿದ್ದರು. ಆಟೋ ಕ್ರಾಸ್‌ ಹಿಲ್‌ ಕ್ಲೈಂಬ್‌ನಲ್ಲಿ ಅತ್ಯಂತ ವೇಗದ ಡ್ರೈವರ್‌ ಆಗಿಯೂ ಹೊರಹೊಮ್ಮಿದ್ದರು.

ಸಮಸ್ತರಲ್ಲಿ ವಿನಂತಿ….

ಇದೇ ಬರುವ ದಿನಾಂಕ ಡಿ.14 ಶನಿವಾರದಂದು ನಡೆಯಬೇಕಿದ್ದ ಬಾರಾಡಿಬೀಡು ಕಂಬಳ ನಮ್ಮ ಕುಟುಂಬದ ಸದಸ್ಯರೊಬ್ಬರ ಆಘಾತಕಾರಿ ಸಾವಿನಿಂದ ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ. ತಾವೆಲ್ಲರೂ ಈ ಸಂದರ್ಭದಲ್ಲಿ ನಮ್ಮ ಜೊತೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಕಂಬಳದ ಮುಂದಿನ ದಿನಾಂಕ ತಿಳಿಸುತ್ತೇವೆ.

ಡಾ|. ಜೀವಂಧರ್ ಬಲ್ಲಾಳ್ ಮತ್ತು ಬಾರಾಡಿಬೀಡು ಕುಟುಂಬಸ್ಥರು

Leave a Reply

Your email address will not be published. Required fields are marked *

error: Content is protected !!