ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ (92) ಅವರು ಮಂಗಳವಾರ ವಿಧಿವಶರಾಗಿದ್ದಾರೆ.

ಇಂದು ಬೆಳಗಿನ ಜಾವ 2 ಗಂಟೆಗೆ ಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಉಸಿರಾಟದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ವೈದ್ಯರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದರು. ಕೂಡಲೇ ವೈದ್ಯರು ಮನೆಗೆ ಆಗಮಿಸಿದ್ದರು. ಬೆಳಗ್ಗೆ 3:30ಕ್ಕೆ ವೈದ್ಯರು ಎಸ್‌ಎಂ ಕೃಷ್ಣ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದರು. ಇಂದು ಬೆಳಗ್ಗೆ ಮನೆಯಿಂದ ಚೆಕಪ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ನಿರ್ಧಾರ ಮಾಡಿದ್ದರು ಎನ್ನಲಾಗಿದೆ.

ಇಂದು ಇಡೀ ದಿನ ಸದಾಶಿವನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಮಧ್ಯಾಹ್ನ 1 ಗಂಟೆಯ ಬಳಿಕ ಹುಟ್ಟೂರು ಮದ್ದೂರಿಗೆ ಪಾರ್ಥಿವ ಶರೀರವನ್ನು ಶಿಫ್ಟ್‌ ಮಾಡಲಾಗುತ್ತದೆ.

ಸದಾಶಿವನಗರ ಎಸ್ ಎಂ ಕೃಷ್ಣ ಮನೆ ಬಳಿ ಪೊಲೀಸರ ಅಲರ್ಟ್‌ ಆಗಿದ್ದು, ನಿವಾಸದ ಅಕ್ಕಪಕ್ಕ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸ್ ಭದ್ರತೆ ಕಲ್ಪಿಸಿದ್ದಾರೆ.

ಕರ್ನಾಟಕದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಎಂಬ ಗ್ರಾಮದಲ್ಲಿ 1932 ರ ಮೇ 1ರಂದು ಒಕ್ಕಲಿಗ ಕುಟುಂಬದಲ್ಲಿ ಜನಿಸಿದ ಎಸ್​ಎಂ ಕೃಷ್ಣ ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್, ಯೂನಿವರ್ಸಿಟಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ರುವ ಸದರ್ನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಮತ್ತು ವಾಷಿಂಗ್ಟನ್ ಡಿಸಿಯ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಲಾ ಸ್ಕೂಲ್​ನಿಂದಲೂ ಪದವಿ ಪಡೆದಿದ್ದರು.

Leave a Reply

Your email address will not be published. Required fields are marked *

error: Content is protected !!