ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೀವ ವಿಮಾ ಪ್ರತಿನಿಧಿಗಳಿಂದ ಧರಣಿ

ಉಡುಪಿ: ಕನಿಷ್ಠ ವಿಮಾ ಮೊತ್ತ 1ಲಕ್ಷ ರೂ. ಮರುಜಾರಿ, ವಿಮಾ ಪಾಲಿಸಿ ಖರೀದಿಗೆ ಗರಿಷ್ಠ ವಯೋಮಿತಿ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಫೆಡರೇಶನ್ ಉಡುಪಿ ವಿಭಾಗದ ನೇತೃತ್ವದಲ್ಲಿ ಜೀವ ವಿಮಾ ಪ್ರತಿನಿಧಿಗಳು ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗದಲ್ಲಿ ಇಂದು ಧರಣಿ ನಡೆಸಿದರು.

ಜೀವ ವಿಮಾ ಪ್ರತಿನಿಧಿಗಳ ಭವಿಷ್ಯದ ದೃಷ್ಟಿಯಿಂದ ಎಲ್‌ಐಸಿಗೆ ಮಾರಕವಾಗಿರುವ ಕೆಲವೊಂದು ಬದಲಾವಣೆಯನ್ನು ಶೀಘ್ರವೇ ನಿಲ್ಲಿಸಬೇಕು. ಹಿಂದಿನ ಕಮಿಷನ್ ದರ ಮರುಜಾರಿಗೊಳಿಸಬೇಕು. ಪ್ರೀಮಿಯಂ ಮೇಲಿನ ಜಿಎಸ್ ಟಿ ರದ್ದು ಮಾಡಬೇಕು ಎಂದು ಜೀವ ವಿಮಾ ಪ್ರತಿನಿಧಿಗಳು ಆಗ್ರಹಿಸಿದರು.
ಉಡುಪಿ ವಿಭಾಗೀಯ ಕೌನ್ಸಿಲ್‌ನ ಅಧ್ಯಕ್ಷ ಎ. ವಿಶ್ವನಾಥ್ ಗಟ್ಟಿ ವಗ್ಗ ಮಾತನಾಡಿ, ಕಮಿಷನ್ ದರದ ಪುನರ್ ರಚನೆಯ ಹೆಸರಿನಲ್ಲಿ ನಿಗಮದ ಆಡಳಿತ ಮಂಡಳಿಯು ಪ್ರತಿನಿಶಿಗಳ ಒಟ್ಟಾರೆ ಕಮಿಷನ್ ಗಳಿಕೆಯಲ್ಲಿ ಕಡಿತಗೊಳಿಸಿದೆ. ಅದು ಅತೀ ಹೆಚ್ಚು ಪಾಲಿಸಿ ಮಾರಾಟ ಮಾಡುವ ಪ್ರತಿನಿಧಿಗಳನ್ನು ನಿರುತ್ಸಾಹಗೊಳಿಸುತ್ತದೆ. ಈ ಪ್ರಯತ್ನವನ್ನು ನಾವು ಬಲವಾಗಿ ಖಂಡಿಸುತ್ತಿದ್ದು, ಎಲ್ಲಾ ಪ್ರತಿನಿಧಿಗಳಿಗೆ ಸಮಾನವಾದ ಕಮಿಷನ್ ದರವನ್ನು ನೀಡುವ ಪ್ರಕ್ರಿಯೆಯನ್ನು ಮುಂದುವರಿಸಬೇಕೆಂದು ಆಗ್ರಹಿಸಿದರು.

ಭಾರತೀಯ ಜೀವವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ರಾಜೇಶ್ ಮುಧೋಳ್ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ಉಡುಪಿ ವಿಭಾಗೀಯ ಕೌನ್ಸಿಲ್‌ನ ಕಾರ್ಯದರ್ಶಿ ಎಚ್. ಸುಬ್ರಹ್ಮಣ್ಯ ಭಟ್, ಕೋಶಾಕಾರಿ ಗಂಗಾಧರ್ ಎನ್. ಕೋಟ್ಯಾನ್, ಕಾರ್ಯಕಾರಿ ಮಂಡಳಿಯ ಕಾಶಿನಾಥ ಪುತ್ರನ್, ಮಾಜಿ ಅಧ್ಯಕ್ಷರಾದ ಮುರುಳೀಧರ್ ಡಿ.ವಿ., ಶೇಖರ್ ಪೂಜಾರಿ, ವಂದನಾ ವಿಶ್ವನಾಥ, ಉಡುಪಿ ಶಾಖಾ ಅಧ್ಯಕ್ಷ ರಮೇಶ್ ಆಚಾರ್ಯ ಯು., ಕೋಶಾಕಾರಿ ಜಗದೀಶ್ ಶೆಟ್ಟಿ, ಗಣೇಶ್ ಮೇಸ್ತ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!