ಪಟಾಕಿ ಮಾರಾಟಗಾರರ ಮೊಗದಲ್ಲಿ ಮಂದಾಹಾಸ, ಶಾಸಕ ಭಟ್‌ಗೆ ಕೃತಜ್ಞತೆ ಸಲ್ಲಿಸಿದ ವ್ಯಾಪರಸ್ಥರು
ಉಡುಪಿ: (ಉಡುಪಿ ಟೈಮ್ಸ್ ವರದಿ)ಜಿಲ್ಲೆಯಲ್ಲಿ ಪಟಾಕಿ ಮಾರಾಟಗಾರರ ಪರ ನಿಂತು ವ್ಯಾಪಾರಸ್ಥರ ಮೊಗದಲ್ಲಿ ಮಂದಾಹಾಸ ಮೂಡುವಂತೆ ಮಾಡಿದ ಉಡುಪಿ ಶಾಸಕ ಕೆ.ರಘುಪತಿ ಭಟ್‌ಗೆ ವ್ಯಾಪರಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
ರಾಜ್ಯ ಸರಕಾರ ದೀಪಾವಳಿ ಹಬ್ಬ ಸಮೀಪಿಸುತ್ತಿರುವಾಗ ಕೊನೆ ಗಳಿಗೆಯಲ್ಲಿ ರಾಜ್ಯಾದತ್ಯಂತ ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿತ್ತು. ಕೇವಲ ಹಸಿರು ಪಟಾಕಿ ಮಾರಾಟ ಮಾಡುವಂತೆ ಆದೇಶಿಸಿತ್ತು. ಆದರೆ ಅಷ್ಟೋತ್ತಿಗಾಗಲೇ ಸಗಟು ವ್ಯಾಪರಸ್ಥರು ಲಕ್ಷಾಂತರ ರೂಪಾಯಿಗಳ ಪಟಾಕಿಗಳನ್ನು ತರಿಸಿಕೊಂಡಿದ್ದರು. ಸರಕಾರದ ಕೊನೆಗಳಿಗೆಯ ಆದೇಶದಿಂದ ನೊಂದ ವ್ಯಾಪರಸ್ಥರ ಪರವಾಗಿ ಜಿಲ್ಲಾಡಳಿತದ ಜೊತೆ ಚರ್ಚಿಸಿದ ಶಾಸಕ ಕೆ.ರಘುಪತಿ ಭಟ್ ಪಟಾಕಿ ಮಾರಾಟಕ್ಕೆ ಕೆಲವೊಂದು ಷರತ್ತುಗಳನ್ನು ಸಡಿಲಿಸಿ ಅನುಮತಿ ದೊರಕಿಸಿಕೊಟ್ಟಿದ್ದರು.
ಜಿಲ್ಲೆಯಲ್ಲಿ 140 ಕ್ಕೂ ಹೆಚ್ಚು ಪಟಾಕಿ ಸ್ಟಾಲ್ ಹಾಕಲಾಗಿದ್ದು, ಹಬ್ಬ ಪ್ರಾರಂಭವಾಗುತ್ತಿದ್ದಂತೆ ಮಂದಗತಿಯಲ್ಲಿದ್ದ ವ್ಯಾಪರವು ಕೊನೆಗಳಿಗೆಯಲ್ಲಿ ಗ್ರಾಹಕರು ಪಟಾಕಿ ಖರೀದಿಗೆ ಸ್ಟಾಲ್‌ಗಳಿಗೆ ಆಗಮಿಸಿದ್ದರಿಂದ ವಹಿವಾಟು ಏರುಗತಿಯಲ್ಲಿ ಸಾಗಿತ್ತು ಎಂದು ಉಡುಪಿಯ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ಪಟಾಕಿ ಮಾರಾಟದ ಬಗ್ಗೆ ಇರುವ ಸಮಸ್ಯೆಯನ್ನು ಅರಿತ ಶಾಸಕ ಭಟ್ ನೇತೃತ್ವದಲ್ಲಿ 60 ಜನರ ನಿಯೋಗವೊಂದು ಉಡುಪಿ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಈಗಾಗಲೇ ಕೊರೋನಾ ಸಂಕಷ್ಟದಿಂದ ವ್ಯಾಪರಸ್ಥರು ವ್ಯವಹಾರವಿಲ್ಲದೆ ಸೋತು ಹೋಗಿದ್ದಾರೆ, ಹೊರ ರಾಜ್ಯದಿಂದ ಲಕ್ಷಾಂತರ ರೂ. ನೀಡಿ ಪಟಾಕಿ ಖರೀಸಿದ್ದಾರೆ, ಸರಕಾರದ ನಿರ್ಧಾರದಿಂದ ವ್ಯಾಪರಸ್ಥರು ಮತ್ತಷ್ಟು ನಷ್ಟ ಅನುಭವಿಸುತ್ತಾರೆ ಎಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದರು.