ಮಹಾಲಕ್ಷ್ಮೀ ಕೋ ಆ. ಬ್ಯಾಂಕ್‌ನಲ್ಲಿ ಅವ್ಯವಹಾರ ತನಿಖೆ- ‘ಸಂತ್ರಸ್ತರಿಗೆ ಸಿಕ್ಕಿರುವ ಮೊದಲ ಗೆಲುವು’
ಉಡುಪಿ, ಡಿ.6: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆದಿರುವ ಕೋಟ್ಯಾಂತರ ರೂ.ಗಳ ಅವ್ಯವಹಾರ ಕುರಿತು ‘ಕಲಂ 64’ರ ಅಡಿಯಲ್ಲಿ ವಿಚಾರಣೆಗೆ ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ನಿಬಂಧಕರು ಆದೇಶ ನೀಡಿರುವುದು ಸಂತ್ರಸ್ತರು ಕಳೆದ ಎರಡು ತಿಂಗಳಿನಿಂದ ನಡೆಸುತ್ತಿರುವ ಸತತ ಹೋರಾಟಕ್ಕೆ ಸಿಕ್ಕ ಮೊದಲ ಗೆಲುವಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರ ಪರವಾಗಿ ಮಾತನಾಡಿದ, ಪ್ರಕರಣದ ಕುರಿತು ದೂರು ನೀಡಿರುವ ಪ್ರಸಾದ್ ಕುಲಾಲ್ ಹಾಗೂ ನವೀನ್ ಸಾಲ್ಯಾನ್ ಕುಕ್ಕೆಹಳ್ಳಿ, ವಿಚಾರಣೆಗೆ ಒಳಪಡಿಸುವಾಗ ಬ್ಯಾಂಕಿನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಿತ ಸಿಬ್ಬಂದಿಗಳನ್ನು ಸಹ ವಿಚಾರಣೆಗೊಳಪಡಿಸಬೇಕು ಎಂದು ತಿಳಿಸಿದರು.
ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ‘ಕಲಂ 64’ರಡಿಯಲ್ಲಿ ವಿಚಾರಣೆ ನಡೆಸುವಂತೆ ಸಂತ್ರ ಸ್ತರು ಬೆಂಗಳೂರಿನಲ್ಲಿ ಸಹಕಾರಿ ಸಚಿವರನ್ನು ಹಾಗೂ ಸಹಕಾರಿ ಸಂಘಗಳ ನಿಬಂಧಕರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಗ್ರ ತನಿಖೆಗೆ ಒತ್ತಾಯಿಸಿತ್ತು ಎಂದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ನೀಡಿರುವ ಸಾಲವನ್ನು ಸ್ವಂತಕ್ಕೆ ಬಳಸಲಾಗಿತ್ತು ಎಂಬ ತಮ್ಮ ದೂರಿನ ಬಗ್ಗೆ ಇದೀಗ ಸರಕಾರ, ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959ರ ಪ್ರಕಾರ ಉಡುಪಿ ಜಿಲ್ಲೆಯ ಸಹಕಾರಿ ಸಂಘಗಳ ಉಪನಿಬಂಧಕರನ್ನು ವಿಚಾರಣೆಗಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದರು.
ವಿಚಾರಣೆಯ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಲೋಪದೋಷಗಳು ಈ ಬ್ಯಾಂಕಿನಿಂದ ಆಗಿದ್ದು, ಎಲ್ಲಾ ಲೋಪಗಳ ಬಗ್ಗೆ ವಿಚಾರಣೆಗೆ ಸರಕಾರ ಆದೇಶಿಸಿದ್ದು, ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆಯೂ ಆದೇಶದಲ್ಲಿ ಸೂಚಿಸಲಾಗಿದೆ ಎಂದು ಪ್ರಸಾದ್ ಕುಲಾಲ್ ತಿಳಿಸಿದರು.
ತನಿಖಾಧಿಕಾರಿಗಳಿಗೆ ಮನವಿ: ಈ ಅವ್ಯವಹಾರ ತನಿಖೆಯ ವಿಚಾರಣಾಧಿಕಾರಿಯವರು ನಿಷ್ಪಕ್ಷಪಾತ ತನಿಖೆ ನಡೆಸಿ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟು ನೂರಾರು ಜನರ ಸಮಸ್ಯೆಗೆ ಪರಿಹಾರ ಒದಗಿಸ ಬೇಕೆಂದು ತಾವು ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರಲ್ಲಿ ಮನವಿ ಮಾಡುವುದಾಗಿ ಪ್ರಸಾದ್ ಕುಲಾಲ್ ಹಾಗೂ ನವೀನ್ ಸಾಲ್ಯಾನ್ ತಿಳಿಸಿದರು.
ಇದರೊಂದಿಗೆ ನಕಲಿ ಸಹಿಮಾಡಿ, ನಕಲಿ ದಾಖಲೆಗಳ ನ್ನು ಸೃಷ್ಟಿಸಿ, ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದು ಸ್ವಂತಕ್ಕೆ ಬಳಸಿ ನಂಬಿಕೆ ದ್ರೋಹ ಮಾಡಿರುವುದಾಗಿ ತಿಳಿಸಿದ ಅವರು, ಸಹಿಯೇ ಹಾಕದ ಕೆಲವರ ನಕಲಿ ಸಹಿಯನ್ನು ವಿಧಿವಿಜ್ಞಾನ ತಪಾಸಣೆಗೊಳಪಡಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದವರು ಒತ್ತಾಯಿಸಿದರು.
2023ರ ಮಾ.8ರಿಂದ 2024ರ ಜು.1ರವರೆಗೆ 1413 ಸದಸ್ಯರಿಗೆ ತಲಾ 2 ಲಕ್ಷ ರೂ.ನಂತೆ ಒಟ್ಟು 28.26 ಕೋಟಿ ರೂ. ಸಾಲವನ್ನು ನಕಲಿ ದಾಖಲೆ ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ಸ್ವಂತಕ್ಕೆ ಬಳಸಿರುವ ಬಗ್ಗೆ ಸಹಕಾರಿ ಸಂಘಗಳ ಲೆಕ್ಕಪರಿಶೋಧನಾಧಿಕಾರಿಯಾಗಿ ರುವ ಕೆ.ಎನ್.ಜಗದೀಶ್ ಅವರು 2023ರ ಜು.10 ರಂದು ವರದಿ ನೀಡಿದ್ದು, ಇವರನ್ನು ಕೂಡಾ ವಿಚಾರಣೆಗೊಳ ಪಡಿಸಬೇಕು ಎಂದವರು ತಿಳಿಸಿದರು.
ಎಸ್‌ಐಟಿ ತನಿಖೆಗೆ ಪ್ರಯತ್ನ: ಸರಕಾರ ಈಗಾಗಲೇ ಒಂದು ಹಂತದ ತನಿಖೆಗೆ ಆದೇಶ ನೀಡಿರುವುದು ಹೋರಾಟಗಾರರಾದ ನಮಗೆ ಅತ್ಯಂತ ಸಂತೋಷ ತಂದಿದ್ದು, ನ್ಯಾಯ ಸಿಗುವ ಭರವಸೆ ಮೂಡಿಬಂದಿದೆ. ಇಡೀ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ, ಎಸ್‌ಐಟಿ ತನಿಖೆಗೂ ಪ್ರಯತ್ನ ನಡೆಯುತ್ತಿದೆ ಎಂದು ನವೀನ್ ಸಾಲ್ಯಾನ್, ಮಲ್ಪೆ ಶಾಖೆಯ ಮ್ಯಾನೇಜರ್ ಆಗಿದ್ದ ಸುಬ್ಬಣ್ಣ ಅವರ ಆತ್ಮಹತ್ಯೆ ಸಂಶಯಾಸ್ಪದವಾ ಗಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತಿದ್ದೇವೆ ಎಂದರು.
ಬಾಯಿ ಮುಚ್ಚಿಸುವ ಪ್ರಯತ್ನ: ಸತ್ಯಧರ್ಮದ ನೆಲೆಯಲ್ಲಿ ಹೋರಾಟ ಮಾಡುತ್ತಿರುವ ನಮ್ಮ ಬಾಯಿ ಮುಚ್ಚಿಸಿ, ಹೋರಾಟ ವನ್ನು ಇಲ್ಲಿಗೆ ನಿಲ್ಲಿಸುವಂತೆ ವಾಮಮಾರ್ಗದ ಮೂಲಕ ಪ್ರಯತ್ನ ನಡೆಯುತಿದ್ದು, ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಕೆಲವರು ಮಾಡುತಿದ್ದಾರೆ ಎಂದವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೀಪಕ್ ಶೆಣೈ ಹಾಗೂ ಕೋಟ ನಾಗೇಂದ್ರ ಪುತ್ರನ್ ಉಪಸ್ಥಿತರಿದ್ದರು.