ಸರ್ಕಾರದಿಂದಲೇ ಕ್ಷೌರದಂಗಡಿ ಆರಂಭ ?: ಸಮಾಜ ಕಲ್ಯಾಣ ಇಲಾಖೆ ಯೋಜನೆ
ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದ ಕ್ಷೌರದಂಗಡಿಗಳಲ್ಲಿ ನಡೆಯುವ ಜಾತಿ ಆಧಾರಿತ ತಾರತಮ್ಯದ ಪ್ರಕರಣಗಳನ್ನು ಕೊನೆಗಾಣಿಸುವ ಉದ್ದೇಶದಿಂದ ಸರ್ಕಾರದಿಂದ ಕ್ಷೌರದಂಗಡಿ ಆರಂಭಿಸುವ ಪ್ರಸ್ತಾವವನ್ನು ಸಮಾಜ ಕಲ್ಯಾಣ ಇಲಾಖೆ ಮುಂದಿಟ್ಟಿದೆ.
ಕೇರಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಕ್ಷೌರ ಮಾಡಲು ನಿರಾಕರಿಸಿದ ಗ್ರಾಮಗಳಲ್ಲಿ ಅಲ್ಲಿನ ಸರ್ಕಾರವೇ ಕ್ಷೌರದಂಗಡಿಗಳನ್ನು ಆರಂಭಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕ್ಷೌರದಂಗಡಿಗಳನ್ನು ಆರಂಭಿಸಲು ಅನುಮತಿ ಕೋರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.
‘ಹಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಕ್ಷೌರ ಮಾಡಲು ನಿರಾಕರಿಸಲಾಗುತ್ತಿದೆ. ಈ ಕಾರಣಕ್ಕಾಗಿ ದಲಿತರ ಮೇಲಿನ ದೌರ್ಜನ್ಯ ಆರೋಪದಡಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಈ ಸಮಸ್ಯೆ ನಿವಾರಣೆಗೆ ಗ್ರಾಮ ಪಂಚಾಯಿತಿಗಳ ಮೂಲಕ ಕ್ಷೌರದಂಗಡಿ ಆರಂಭಿಸಬಹುದು. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಮಂಜೂರು ಮಾಡಬಹುದು’ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.
2019ರಿಂದ ಈಚೆಗೆ ರಾಜ್ಯದ ಗ್ರಾಮೀಣ ಪ್ರದೇಶದ ಹಲವೆಡೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಕ್ಷೌರ ಮಾಡಲು ನಿರಾಕರಿಸಿದ ಪ್ರಕರಣಗಳು ನಡೆದಿವೆ. ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಇತ್ತೀಚೆಗಷ್ಟೆ ಅಂತಹ ಪ್ರಕರಣಗಳು ನಡೆದಿದ್ದವು. ಸರ್ಕಾರದಿಂದ ಕ್ಷೌರದಂಗಡಿ ಆರಂಭದ ಕುರಿತು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಉನ್ನತ ಮೂಲದಿಂದ ಮಾಹಿತಿ ತಿಳಿದು ಬಂದಿದೆ.