ಮಹಾಲಕ್ಷ್ಮಿ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ಅವ್ಯವಹಾರ ಪ್ರಕರಣ: ಸಹಕಾರ ಸಂಘಗಳ ಕಾಯ್ದೆ ಕಲಂ 64ರಡಿ ವಿಚಾರಣೆಗೆ ಆದೇಶ

ಉಡುಪಿ, ಡಿ.6: ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಕಲಂ 64ರಡಿಯಲ್ಲಿ ವಿಚಾರಣೆ ನಡೆಸುವಂತೆ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರು ಆದೇಶ ನೀಡಿದ್ದು, ಈ ಸಂಬಂಧ ವಿಚಾರಣಾಧಿಕಾರಿಯಾಗಿ ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರನ್ನು ನೇಮಕ ಮಾಡಲಾಗಿದೆ.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮದಡಿ ನೋಂದಣಿಗೊಂಡು, ಆರ್‌ಬಿಐನಿಂದ ಬ್ಯಾಂಕಿಂಗ್ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿದೆ. ಈ ಬ್ಯಾಂಕಿನ ಮಲ್ಪೆ ಶಾಖೆಯ ಗ್ರಾಹಕ ಪ್ರಸಾದ್ ಕುಲಾಲ್ ಮತ್ತು ಇತರರು ನೀಡಿರುವ ದೂರಿನಲ್ಲಿ, ಬ್ಯಾಂಕಿನ ಗ್ರಾಹಕರಿಂದ ಆಧಾರ್ ಕಾರ್ಡ್ ಮತ್ತು ಪಾನ್‌ ಕಾರ್ಡ್ ಪಡೆದು ಕ್ರಿಮಿನಲ್ಸ್ ಸಂಚು ರೂಪಿಸಿ ನಕಲಿ ಸಹಿ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಗ್ರಾಹಕರ ಹೆಸರಿನಿಂದ ಸಾಲ ಪಡೆದು ಅದನ್ನು ಸ್ವತಂಕ್ಕೆ ಬಳಸಿಕೊಂಡು ನಷ್ಟ ಉಂಟು ಮಾಡಿ ನಂಬಿಕೆ ದ್ರೋಹ ಮಾಡಿರುವುದಾಗಿ ತಿಳಿಸಲಾಗಿದೆ.

2023ರ ಮಾ.8ರಿಂದ 2024ರ ಜು.1ರವರೆಗೆ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರಿಂದ 1413 ಸದಸ್ಯರಿಗೆ ತಲಾ 2 ಲಕ್ಷ ರೂ.ನಂತೆ 28,26,00,000 ರೂ. ಸಾಲವನ್ನು ನಕಲಿ ದಾಖಲೆ ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ಸ್ವಂತಕ್ಕೆ ಬಳಸಿರುವ ಬಗ್ಗೆ ಸಹಕಾರಿ ಸಂಘಗಳ ಲೆಕ್ಕಪರಿ ಶೋಧನಾಧಿಕಾರಿ 2023ರ ಜು.10ರಂದು ವರದಿ ನೀಡಿರುವುದಾಗಿ ದೂರ ಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧ್ಯಕ್ಷರು, ಮ್ಯಾನೇಜರ್ ಸುಬ್ಬಣ್ಣ ಹಾಗೂ ಸಂಬಂಧ ಪಟ್ಟ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಈ ಪ್ರಕರಣವು ಗಂಭೀರವಾಗಿರುವುದರಿಂದ ಈ ಸಂಬಂಧ ಶಾಸನಾತ್ಮಕ ವಿಚಾರಣೆ ನಡೆಸುವುದು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದು, ಈ ಕುರಿತು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 64ರಡಿ ಶಾಸನಬದ್ಧ ವಿಚಾರಣೆಗೆ ಒಳಪಡಿಸಿ ಆದೇಶವನ್ನು ಹೊರಡಿಸಿದೆ. ವಿಚಾರಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪ ಬಂಧಕರು, ಉಡುಪಿ ಜಿಲ್ಲೆ, ಇವರನ್ನು ನೇಮಿಸಿ ಆದೇಶಿಸಲಾಗಿದೆ.

2023ರ ಮಾ.8ರಿಂದ 2024ರ ಜು.1ರವರೆಗೆ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರಿಂದ 1413 ಸದಸ್ಯರಿಗೆ ತಲಾ 2 ಲಕ್ಷ ರೂ. ನಂತೆ 28,26,00,000ರೂ. ಸಾಲವನ್ನು ನಕಲಿ ದಾಖಲೆ ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ಸ್ವಂತಕ್ಕೆ ಬಳಸಿರುವ ಬಗ್ಗೆ ಹಾಗೂ ಇನ್ನಿತರ ಲೋಪದೋಷಗಳ ಬಗ್ಗೆ ವಿಚಾರಣೆ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ವಿಚಾರಣಾಧಿಕಾರಿಗಳು 2 ತಿಂಗಳೊಳಗಾಗಿ ವಿಚಾರಣೆ ನಡೆಸಿ ವಿಚಾರಣಾ ವರದಿಯನ್ನು ಸಲ್ಲಿಸಲು ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರು ಆದೇಶದಲ್ಲಿ ಸೂಚಿಸಿದ್ದಾರೆ.

ಸಂತ್ರಸ್ತರ ಸಹಿ ಎಫ್‌ಎಸ್‌ಎಲ್ ತನಿಖೆಗೆ ಒಳಪಡಿಸಲು ಆಗ್ರಹ

ಮಹಾಲಕ್ಷ್ಮೀ ಬ್ಯಾಂಕಿನಲ್ಲಿ ನಡೆದಿರುವ ವಂಚನೆಗೆ ಸಂಬಂಧಿಸಿ ಸುಮಾರು 31 ಜನ ಬ್ಯಾಂಕಿನ ಸಾಲ ಪತ್ರಕ್ಕೆ ಸಹಿಯನ್ನೇ ಹಾಕಿರಲಿಲ್ಲ. ಬ್ಯಾಂಕಿನ ದಾಖಲೆಗಳಲ್ಲಿ ನಮ್ಮ ಸಹಿಯನ್ನು ಫೋರ್ಜರಿ ಮಾಡಿದ್ದು, ನಮ್ಮ ಮನೆಗೆ ಬಂದು ಕೇವಲ 20,000 ರೂ. ಮಾತ್ರ ನೀಡಿ, ಈಗ 3 ಲಕ್ಷ ರೂ.ವರೆಗೆ ಪಾವತಿಸ ಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ನನ್ನ ಬಳಿ ದೂರಿದ್ದಾರೆ. ಬ್ಯಾಂಕಿನ ಸಾಲ ಪತ್ರದಲ್ಲಿರುವ ಈ 31 ಮಂದಿಯ ಸಹಿಯ ಸತ್ಯಾಸತ್ಯತೆ ತಿಳಿಯಲು ವಿಧಿ ವಿಜ್ಞಾನ ಇಲಾಖೆ (ಎಫ್‌ಎಸ್‌ಎಲ್) ಮೂಲಕ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ವಿಚಾರಣಾಧಿಕಾರಿ ಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸುಮಾರು 13 ಜನ ಬ್ಯಾಂಕಿನ ಸಾಲ ಪತ್ರಕ್ಕೆ ಕೆಲವು ಮಾತ್ರ ಸಹಿಯನ್ನು ಹಾಕಿದ್ದು ಆದರೆ ತಮಗೆ ಚಿಕ್ಕಕಾಸು ಹಣ ಸಾಲ ರೂಪದಲ್ಲಿ ಸಿಕ್ಕಿಲ್ಲವೆಂದು ನನ್ನ ಬಳಿ ದೂರಿದ್ದಾರೆ. ಅವರದ್ದೂ ಕೆಲವು ಸಹಿಗಳನ್ನು ಬ್ಯಾಂಕಿನ ಸಿಬ್ಬಂದಿಗಳೇ ಫೋರ್ಜರಿ ಮಾಡಿದ್ದಾರೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರಿಗೂ ಅಸಲು ಎರಡು ಲಕ್ಷ ರೂ. ಸಾಲವನ್ನು ತೋರಿಸಿ ಬಡ್ಡಿ ಸಮೇತ 3 ಲಕ್ಷಕ್ಕೂ ಹೆಚ್ಚು ಪಾವತಿಸಬೇಕೆಂದು ಬ್ಯಾಂಕಿನವರು ಒತ್ತಡವನ್ನು ಹೇರುತ್ತಿದ್ದಾರೆ.

ಇನ್ನು ಉಳಿದ 86 ಜನರ ಹತ್ತಿರ ಬ್ಯಾಂಕಿನ ಸಾಲದ ದಾಖಲೆಗಳಿಗೆ ಸಹಿಯನ್ನು ಪಡೆದುಕೊಂಡಿದ್ದು ಅವರಿಗೆ ತಲಾ 20ಸಾವಿರ, 40ಸಾವಿರ, 70ಸಾವಿರದಂತೆ ಸಾಲದ ಹಣವನ್ನು ನೀಡಿದ್ದು ಆದರೆ ಬ್ಯಾಂಕಿನ ದಾಖಲೆಗಳಲ್ಲಿ 2ಲಕ್ಷ ಸಾಲವನ್ನು ತೋರಿಸಿ ಬಡ್ಡಿ ಸಮೇತ 3ಲಕ್ಷಕ್ಕೂ ಅಧಿಕ ಪಾವತಿಸಬೇಕೆಂದು ಬ್ಯಾಂಕಿನವರು ಒತ್ತಾಯಿಸುತ್ತಿದ್ದಾರೆಂದು ಸಂತ್ರಸ್ತರು ದೂರಿದ್ದಾರೆ. ಈ ಎಲ್ಲಾ ಸಂತ್ರಸ್ತರು ತಾವು ಪಡೆದ ಹಣವನ್ನು ಬಡ್ಡಿ ಸಮೇತ ಪಾವತಿಸಲು ಬದ್ಧರಾಗಿರುವರೆಂದು ತಿಳಿಸಿದ್ದು ಅವರಿಗೆ ನ್ಯಾಯ ಒದಗಿಸಿಕೊಟ್ಟು ಅವರನ್ನು ಸಾಲ ಮುಕ್ತರನ್ನಾಗಿ ಮಾಡಬೇಕು ಮತ್ತು ಆ ಮೂಲಕ ಅವರೆಲ್ಲರೂ ಎದುರಿಸುತ್ತಿರುವ ಸಿಬಿಲ್ ಸಮಸ್ಯೆಯಿಂದ ಪಾರು ಮಾಡಬೇಕು ಎಂದು ರಘುಪತಿ ಭಟ್ ಪತ್ರದಲ್ಲಿ ಒತ್ತಾಯಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!