ಕನಿಷ್ಟ 4 ಮಕ್ಕಳನ್ನು ಮಾಡಿಕೊಳ್ಳಿ- ಶ್ರೀ ಕಾಳಹಸ್ತೇಂಧ್ರ ಸರಸ್ವತಿ
ಉಡುಪಿ: ಹಿಂದೂಗಳು ಸಂತತಿಯನ್ನು ಹೆಚ್ಚಿಸಿಕೊಳ್ಳಬೇಕು. ಮನೆ, ದೇಶ, ಸಮಾಜ ಹಾಗು ಧರ್ಮಕ್ಕೆ ಎಂದು ಕನಿಷ್ಟ 4 ಮಕ್ಕಳನ್ನು ಮಾಡಿಕೊಳ್ಳಬೇಕು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ದಯನೀಯ ಪರಿಸ್ಥಿತಿಯನ್ನು ನಾವು ಗಮನಿಸುತ್ತಿದ್ದೇವೆ. ಮುಂದೆ ಭಾರತದಲ್ಲಿಯೂ ಈ ಸ್ಥಿತಿ ಬಾರದಂತೆ ಮಾಡಲು ಹಿಂದೂಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿಯವರು ಕರೆ ನೀಡಿದರು.
ಅವರು ಬುಧವಾರ ಉಡುಪಿಯಲ್ಲಿ ನಡೆದ ಬೃಹತ್ ಜನಾಂದೋಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಾತೆಯರು ಅಷ್ಟ ಮಕ್ಕಳನ್ನು ಹೆತ್ತು ಹಿಂದೂ ರಾಷ್ಟ್ರಕ್ಕೆ ಕೊಡುಗೆ ನೀಡಬೇಕು, ಕಡೆಯ ಪಕ್ಷ ಕನಿಷ್ಠ ನಾಲ್ಕು ಮಕ್ಕಳಿಗೆ ಆದರೂ ಜನ್ಮ ನೀಡಬೇಕೆಂದು ಮನವಿ ಮಾಡಿದರು. ಬಾಂಗ್ಲಾದೇಶದಲ್ಲಿ ಜಂಗಲ್ ರಾಜ್ ಸರಕಾರ ಅಸ್ತಿತ್ವದಲ್ಲಿದೆ. ಅಂತಾರಾಷ್ಟ್ರೀಯ ಸಂಘಟನೆಗಳ ಮೂಲಕ ಒತ್ತಡವನ್ನು ಹೇರಿ, ಅಲ್ಲಿನ ಹಿಂದೂಗಳನ್ನು ರಕ್ಷಿಸುವ ಹೊಣೆಯನ್ನು ಕೇಂದ್ರ ಸರಕಾರ ಹೊರಬೇಕು. ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ರಕ್ಷಣೆ ಸಿಗುವವರೆಗೆ ಆ ದೇಶದ ಜೊತೆಗೆ ಯಾವುದೇ ರೀತಿಯ ವ್ಯಾಪಾರ, ಕ್ರಿಕೆಟ್ ಪಂದ್ಯಾಟಗಳನ್ನು ನಡೆಸುವುದಿಲ್ಲ ಎಂಬ ಕಠಿಣ ನಿರ್ಧಾರವನ್ನು ತಾಳಬೇಕು ಎಂದರು.
ಪ್ರತಿಯೊಬ್ಬ ಹಿಂದೂ ಬಾಂಗ್ಲಾದೇಶದಲ್ಲಿನ ಹಿಂದೂವನ್ನು ರಕ್ಷಿಸುವಂತೆ ಆಗ್ರಹಿಸಿ, ಪೋಸ್ಟ್ ಕಾರ್ಡ್ ಬರೆದು ಕೇಂದ್ರ ಸರಕಾರಕ್ಕೆ ಕಳುಹಿಸಬೇಕು. ಸಾಮಾಜಿಕ ಜಾಲತಾಣವನ್ನು ಪ್ರಬಲವಾಗಿ ಬಳಸಿ ಸೇವ್ ಬಾಂಗ್ಲಾ ಹಿಂದೂ ಎಂಬ ಅಭಿಯಾನವನ್ನು ಆರಂಭಿಸಬೇಕು ಎಂದು ಕರೆ ನೀಡಿದರು.
ಎರಡು ತಿಂಗಳ ಹಿಂದೆಯೇ ಈ ಪ್ರತಿಭಟನೆ ನಡೆಯಬೇಕಿತ್ತು. ಬಾಂಗ್ಲಾದೇಶದಲ್ಲಿನ ಘಟನೆಗಳಿಗೆ ನಾವು ಸ್ಪಂದಿಸಬೇಕೆಂದು ಹಿಂದೂಗಳಿಗೆ ತಡವಾಗಿ ಅರಿವಾಗಿರುವುದು ಸರಿಯಲ್ಲ. ಹಿಂದೂಗಳಿಗೆಂದು ಇರುವ ಜಗತ್ತಿನ ಏಕೈಕ ದೇಶ ಭಾರತ. ಇಂದಿನ ಸಭೆಗೂ ಪೂರ್ಣವಾಗಿ ಹಿಂದೂಗಳು ಭಾಗವಹಿಸಿಲ್ಲ ಎಂದವರು ವಿಷಾದಿಸಿದರು.