ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿ ವಿರುದ್ಧ ‘ಸಾಕ್ಷ್ಯ ಪತ್ತೆ’ ಹಚ್ಚಿದ ಇಡಿ; ಸಿಎಂಗೆ ಮತ್ತಷ್ಟು ಸಂಕಷ್ಟ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ನಿಶ್ಚಲವಾಗಿದೆ.
ಮುಡಾದಿಂದ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಹಸ್ತಾಂತರಿಸಿರುವ ಪ್ರಕರಣದಲ್ಲಿ ಹಲವು ಅಕ್ರಮಗಳು ನಡೆದಿರುವ ಬಗ್ಗೆ ಪುರಾವೆಗಳು ಸಿಕ್ಕಿವೆ ಎಂದು ಇಡಿ ತಿಳಿಸಿದೆ.
ಕೇಂದ್ರ ತನಿಖಾ ಸಂಸ್ಥೆ ಪ್ರಕರಣ ಸಂಬಂಧ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಇತ್ತೀಚೆಗೆ ಕಳುಹಿಸಿದ ಸಂವಹನದಲ್ಲಿ, ಮುಡಾ ಒಟ್ಟು 1,095 ಸೈಟ್‌ಗಳನ್ನು ಬೇನಾಮಿ ಮತ್ತು ಇತರ ವಹಿವಾಟುಗಳಲ್ಲಿ ‘ಅಕ್ರಮವಾಗಿ’ ಮಂಜೂರು ಮಾಡಿದೆ ಎಂಬುದು ತನ್ನ ತನಿಖೆಯಲ್ಲಿ ಕಂಡುಬಂದಿದೆ ಎಂದು ಹೇಳಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ವೇಳೆ, ಭೂಪರಿವರ್ತನೆಯಲ್ಲಿ ‘ಕಾನೂನುಬದ್ಧ ಮಾರ್ಗಸೂಚಿಗಳ ಉಲ್ಲಂಘನೆ’, ಕಚೇರಿಯ ಕಾರ್ಯವಿಧಾನಗಳ ಉಲ್ಲಂಘನೆ, ‘ಅನಾವಶ್ಯಕ’ ಕೃಪಾಕಟಾಕ್ಷ ಮತ್ತು ಪ್ರಭಾವದ ಬಳಕೆ ಹಾಗೂ ಸಹಿಗಳ ‘ಫೋರ್ಜರಿ’ಗೆ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್ ಜಿ ದಿನೇಶ್ ಕುಮಾರ್ ಅಲಿಯಾಸ್ ಸಿ ಟಿ ಕುಮಾರ್ ಅವರು ಈ ಪ್ರಕ್ರಿಯೆಯಲ್ಲಿ ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಇಡಿ ಹೇಳಿಕೊಂಡಿದೆ.
ಮುಡಾದಲ್ಲಿ ಆಪಾದಿತ ಅಕ್ರಮ ಚಟುವಟಿಕೆಗಳು ಪಾರ್ವತಿ ಪ್ರಕರಣದೊಂದಿಗೆ ಕೊನೆಗೊಂಡಿಲ್ಲ. 700 ಕೋಟಿ ರೂ.ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯದ ಒಟ್ಟು 1,095 ಸೈಟ್‌ಗಳನ್ನು ‘ಕಾನೂನುಬಾಹಿರವಾಗಿ’ ಹಂಚಿಕೆ ಮಾಡಲಾಗಿದೆ ಎಂದು ಇಡಿ ತನಿಖಾ ವರದಿ ಮತ್ತು ಅಧಿಕೃತ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.