ಉಡುಪಿ ಜಿಲ್ಲಾಸ್ಪತ್ರೆಯ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು
ಉಡುಪಿ, ಡಿ.3: ಅಜ್ಜರಕಾಡುವಿನಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಸ್ಪತ್ರೆಯ ಬಹುಮಹಡಿ ಕಟ್ಟಡದಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಡಿ.2ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಮೂಡುಬೆಳ್ಳೆ ಗ್ರಾಮದ ಸಂತೋಷ್(46) ಎಂದು ಗುರುತಿಸಲಾಗಿದೆ. ಇವರು ನಿರ್ಮಾಣ ಹಂತದಲ್ಲಿರುವ ಸರಕಾರಿ ಆಸ್ಪತ್ರೆಗೆ ವಾಟರ್ ಪ್ರೂಫಿಂಗ್ ಕೆಲಸಕ್ಕೆ ಹೋಗಿದ್ದು, ಕಟ್ಟಡದ ಆರನೇ ಅಂತಸ್ಥಿನ ಮೇಲಿರುವ ಟ್ಯಾಂಕಿಗೆ ವಾಟರ್ ಪ್ರೂಫಿಂಗ್ ಮಾಡಲು ತೆರಳಿದ್ದರು. ಆ ಕೆಲಸವನ್ನು ಮುಗಿಸಿ ವಾಪಸ್ಸು ಕೆಳಗಡೆ ಬರಲು 6ನೇ ಅಂತಸ್ಥಿನ ಮೇಲೆ ಅಳವಡಿಸಿದ ಪಾಲಿಕಾರ್ಮರ್ ಶೀಟ್‌ನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅವುಗಳ ಮಧ್ಯ ಅಳವಡಿಸಿದ ಶೀಟ್ ಒಂದರ ಮೇಲೆ ಕಾಲು ಇಟ್ಟರು.
ಇದರಿಂದ ಸಂತೋಷ್ ಆಯತಪ್ಪಿ6ನೇ ಅಂತಸ್ಥಿನ ಮೇಲ್ಚಾವಣಿನಿಂದ ನೇರ ನೆಲಕ್ಕೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.