ಡಿ.6: ಶೀರೂರು ಮಠದ ಬಾಳೆ ಮುಹೂರ್ತ

ಉಡುಪಿ, ಡಿ.2: 2026 ಜ.18ರಂದು ಮೊದಲ ಬಾರಿ ಪರ್ಯಾಯ ಪೀಠವನ್ನೇರಲಿರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥರ ಪರ್ಯಾಯ ಪೂರ್ವ ಸಿದ್ಧತಾ ಮುಹೂರ್ತಗಳಲ್ಲಿ ಮೊದಲನೆಯದಾದ ಬಾಳೆಮುಹೂರ್ತ ಡಿ.6ರ ಶುಕ್ರವಾರ ನಡೆಯಲಿದೆ ಎಂದು ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.

ಬಾಳೆಮುಹೂರ್ತವೂ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಉಡುಪಿ ಶ್ರೀಪೂರ್ಣಪ್ರಜ್ಞ ಕಾಲೇಜಿನ ಹಿಂಭಾಗದಲ್ಲಿ ರುವ ಶೀರೂರು ಮಠದ ತೋಟದಲ್ಲಿ ನಡೆಯಲಿದೆ. ಇದಕ್ಕೆ ಮುನ್ನ 6ಗಂಟೆಗೆ ಸಾಮೂಹಿಕ ಪ್ರಾರ್ಥನೆ ಹಾಗೂ ಇತರ ವಿಧಿವಿಧಾನಗಳು ನಡೆಯಲಿದ್ದು, ಬಳಿಕ ಶೀರೂರು ಮಠದಿಂದ ಮುಹೂರ್ತ ನಡೆಯುವ ತೋಟದವರೆಗೆ ಮೆರವಣಿಗೆಯಲ್ಲಿ ಬರಲಾಗುವುದು ಎಂದರು.

ಶೀರೂರು ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀವೇದವರ್ಧನ ತೀರ್ಥರ ಪ್ರಥಮ ಶ್ರೀಕೃಷ್ಣ ಪೂಜಾ ಪರ್ಯಾಯ 2026ರ ಜ.18 ರಿಂದ 2028 ಜ.17 ರವರೆಗೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಒಂದು ವರ್ಷ ಮೊದಲೇ ಪ್ರಾರಂಭಗೊಳ್ಳುವ ಪೂರ್ವಸಿದ್ಧತೆಯಲ್ಲಿ ಬಾಳೆ ಮುಹೂರ್ತ ಮೊದಲನೇಯದು ಎಂದರು.

ಪರ್ಯಾಯಾವಧಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ಅನ್ನಸಂತರ್ಪಣೆಗೆ ಬಾಳೆಎಲೆಗಾಗಿ ಬಾಳೆ ಮುಹೂರ್ತ ನಡೆಯಲಿದೆ.ಇಲ್ಲಿ 1000 ಬಾಳೆಗಿಡಗ ಳೊಂದಿಗೆ ಇತರ ಗಿಡಗಳನ್ನು ನೆಡಲಾಗುತ್ತದೆ. ಉಳಿದವುಗಳನ್ನು ಶೀರೂರು ಮೂಲ ಮಠದಲ್ಲಿ ಬೆಳೆಯಲಾಗುತ್ತದೆ ಎಂದು ಉದಯಕುಮಾರ್ ಸರಳತ್ತಾಯ ತಿಳಿಸಿದರು.

ಮಠದ ಭಕ್ತರು, ಶಿಷ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯಶಪಾಲ್ ಸುವರ್ಣ, ಮಠದ ಶ್ರೀಶ ಬಲ್ಲಾಳ, ಮೋಹನ್ ಭಟ್, ಶ್ರೀಪಾದ ಹೆಗ್ಡೆ, ವಾಸುದೇವ ಆಚಾರ್ಯ, ಗೋವಿಂದ, ಶ್ರೀಕಾಂತ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!