ದೆಹಲಿ: ರಾತ್ರಿ ಪಟಾಕಿ ಸಿಡಿಸಿದ 850 ಜನರ ಬಂಧನ – 1,200 ಪ್ರಕರಣ ದಾಖಲು!
ನವದೆಹಲಿ: ಈಗಾಗಲೇ ವಾಯು ಮಾಲಿನ್ಯವಾಗಿರುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿಯಂದು ಪಟಾಕಿ ನಿಷೇಧ ಮಾಡಲಾಗಿದೆ. ಆದರೆ ಈ ನಿಷೇದಾಜ್ಞೆ ಉಲ್ಲಂಘಿಸಿ ಪಟಾಕಿ ಸಿಡಿಸಿದ್ದು ಈ ಕಾರಣದಿಂದಾಗಿ 1,200 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಾಗಿದ್ದು, ದೀಪಾವಳಿಯ ದಿನದಂದೇ 850 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಶನಿವಾರ ಒಟ್ಟು 1314 ಕಿಲೋಗಳಷ್ಟು ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರ ಜಿಲ್ಲೆಯಲ್ಲಿ 165 ಪ್ರಕರಣಗಳು ದಾಖಲಾಗಿದ್ದು ಇದು ಗರಿಷ್ಠ ಪ್ರಕರಣವಾಗಿದೆ. ವಾಯುವ್ಯದಲ್ಲಿ ಒಟ್ಟು 127 ಪ್ರಕರಣಗಳು ವರದಿಯಾಗಿದ್ದು, ದೆಹಲಿ ಮತ್ತು ಮಧ್ಯ ಜಿಲ್ಲೆಯಲ್ಲಿ 17 ಪ್ರಕರಣಗಳು ದಾಖಲಾಗಿವೆ.
ದೆಹಲಿಯಲ್ಲಿ ಪಟಾಕಿ ಸಿಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಒಟ್ಟು 1,206 ಪ್ರಕರಣಗಳು ದಾಖಲಾಗಿವೆ. ಇದು ಬರಿ ದೀಪಾವಳಿ ರಾತ್ರಿಯಲ್ಲಿ ದಾಖಲಾದ ಪ್ರಕರಣಗಳಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪಟಾಕಿ ಸಿಡಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕವಾಗಿ ಪ್ರಚಾರ ಮಾಡುತ್ತಲ್ಲಿದ್ದ ದೃಶ್ಯ ಕೂಡಾ ದೆಹಲಿಯಲ್ಲಿ ಕಂಡು ಬಂದಿದೆ ಎಂದು ವರದಿಯಾಗಿದೆ.
ಆದರೂ ರಾತ್ರಿಯಾಗುತ್ತಿದ್ದಂತೆ ಜನರು ಪಟಾಕಿ ಸಿಡಿಸಿದ್ದು ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿದಿದೆ.ಇನ್ನು ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆಯ ಕುರಿತಾಗಿಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.ಪಟಾಕಿಯ ಅಬ್ಬರ ಶನಿವಾರ ಮಧ್ಯರಾತ್ರಿ ಕಳೆದರೂ ಮುಗಿಯದ ಕಾರಣ ರಾಷ್ಟ್ರ ರಾಜಧಾನಿ ವಲಯಯ ಗಾಳಿಯ ಗುಣಮಟ್ಟವು ತೀವ್ರ ಸ್ವರೂಪದಲ್ಲಿ ಹದಗೆಟ್ಟಿದ್ದು, ಇಲ್ಲಿನ ಐಟಿಒ ಮತ್ತು ಆನಂದ ವಿಹಾರ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು ಕ್ರಮವಾಗಿ 461 ಮತ್ತು 478ರಷ್ಟು ದಾಖಲಾಗಿದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ತಿಳಿಸಿದೆ.