ಬಿಜೆಪಿ ಬಣ ಜಗಳ: ಕೇಂದ್ರ ಶಿಸ್ತು ಸಮಿತಿಯಿಂದ ಯತ್ನಾಳ್ ವಿರುದ್ದ ಶೋಕಾಸ್ ನೋಟಿಸ್

ಬೆಂಗಳೂರು: ಬಿಜೆಪಿ ಪಕ್ಷದ, ನಾಯಕರ ವಿರುದ್ಧ ಬಂಡಾಯವೆದ್ದಿರುವ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಕೇಂದ್ರ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.

ಪಕ್ಷ ವಿರೋಧಿ ಹೇಳಿಕೆ ಹಾಗೂ ನಡೆಯನ್ನ ನೀವು ತೋರುತ್ತಿದ್ದೀರಿ. ವಿನಾಕಾರಣ ಪಕ್ಷದ ವಿರುದ್ಧವೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದೀರಿ. ಇದು ಪಕ್ಷದ ಚೌಕಟ್ಟು ಹಾಗೂ ನಿಯಮವನ್ನು ಮೀರಿದೆ. ಹೀಗಾಗಿ ನಿಮ್ಮ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎಂದು ನೋಟಿಸ್ ನಲ್ಲಿ ಪ್ರಶ್ನಿಸಲಾಗಿದೆ.

ರಾಜ್ಯ ಮಟ್ಟದ ಪಕ್ಷದ ನಾಯಕತ್ವದ ವಿರುದ್ಧ ತಾವು ಮಾಡುತ್ತಿರುವ ನಿರಂತರ ವಾಗ್ದಾಳಿ ಮತ್ತು ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸುತ್ತಿರುವ ಬಗ್ಗೆ ಪಕ್ಷದ ವಿವಿಧ ವೇದಿಕೆಗಳಲ್ಲಿ ವರದಿಯಾಗಿದೆ. ರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ಎಲ್ಲಾ ವಿಷಯಗಳ ಬಗ್ಗೆ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಸಾರ್ವಜನಿಕವಾಗಿ ನೀವು ಹೇಳಿಕೆಗಳನ್ನು ನೀಡುತ್ತಿರುವುದು ಮತ್ತು ನಿಲುವುಗಳನ್ನು ವ್ಯಕ್ತಪಡಿಸುತ್ತಿರುವುದು ತಿಳಿದು ಬಂದಿದೆ. ಈ ಹಿಂದೆಯೂ ಹಲವು ಬಾರಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆಗ ನೀವು ಸದ್ವರ್ತನೆಯ ಭರವಸೆ ನೀಡಿದ್ದರೂ ಅಶಿಸ್ತಿನ ಕೃತ್ಯಗಳು ನಿಮ್ಮಿಂದ ಅವ್ಯಾಹತವಾಗಿ ನಡೆಯುತ್ತಿರುವುದು ಆತಂಕಕಾರಿ ಸಂಗತಿ. ಇದು ಪಕ್ಷದ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ನಿಮ್ಮ ಹಿರಿತನ ಮತ್ತು ಪಕ್ಷದಲ್ಲಿನ ದೀರ್ಘಾವಧಿಯನ್ನು ಗಮನದಲ್ಲಿಟ್ಟು ಕೊಂಡು, ಈ ಹಿಂದೆ ನೀವು ಸಲ್ಲಿಸಿದ ವಿವರಣೆಗಳ ಬಗ್ಗೆ ಕೇಂದ್ರ ಶಿಸ್ತು ಸಮಿತಿಯು ಮೃದುವಾದ ದೃಷ್ಟಿಕೋನ ವನ್ನು ತೆಗೆದುಕೊಂಡಿತ್ತು ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಮುಂದುವರಿದು, ನೋಟಿಸ್ ಗೆ ಹತ್ತು ದಿನಗಳ ಒಳಗೆ ತಕ್ಷಣವೇ ಉತ್ತರ ನೀಡಿ. ಇಲ್ಲದಿದ್ದರೆ ನಿಮಗೆ ಏನೂ ಹೇಳಲು ಉಳಿದಿಲ್ಲ ಎಂದು ತಿಳಿದುಕೊಳ್ಳಬೇಕಾಗುತ್ತ ದೆ. ಶಿಸ್ತು ಸಮಿತಿ ನಿಯಮಾನುಸಾರ ಕ್ರಮತೆಗೆದು ಕೊಳ್ಳಲಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್‌ಗೆ ಉತ್ತರ ನೀಡುತ್ತೇನೆ. ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವಾಸ್ತವಾಂಶವನ್ನು ತಿಳಿಸುತ್ತೇನೆ. ಹಿಂದುತ್ವದ ಹೋರಾಟ, ಭ್ರಷ್ಟಾಚಾರದ ವಿರೋಧ, ವಕ್ಫ್ ಸಂಬಂಧಿತ ಸಮಸ್ಯೆಗಳು ಮತ್ತು ವಂಶವಾಹಿ ರಾಜಕೀಯ ಸಂಬಂಧ ನನ್ನ ಬದ್ಧತೆ ಅಚಲವಾಗಿ ಉಳಿಯುತ್ತದೆ ಎಂದು ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!