ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ- ಆತಂಕಗೊಂಡ ಜನತೆ
ಕಾರವಾರ: ಜಿಲ್ಲೆಯ ಶಿರಸಿ-ಸಿದ್ದಾಪುರದ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಜನರು ಆತಂಕಗೊಂಡ ಘಟನೆ ನಡೆದಿದೆ.
ರವಿವಾರ ಸಿದ್ದಾಪುರ ತಾಲೂಕಿನ ಹೆಗ್ಗರಣಿ, ಹೇರೂರು ಹಾಗೂ ಶಿರಸಿ ತಾಲೂಕಿನ ಸಂಪಖಂಡ, ಗೋಳಿಮಕ್ಕಿ, ಮತ್ತಿಘಟ್ಟಾ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಈ ಗ್ರಾಮಗಳ ವ್ಯಾಪ್ತಿಯ ಮನೆಯಲ್ಲಿದ್ದವರಿಗೆ ಏಕಾಏಕಿ ಮನೆಯ ವಸ್ತುಗಳು ಅಲುಗಾಡಿದ ಅನುಭವವಾಗಿದೆ. ಹಲವರಿಗೆ ಕುಳಿತ ಖುರ್ಚಿ, ಸೋಫಾ ಅಲುಗಾಡಿದ ಅನುಭವವಾಗಿದ್ದು, ಭೂಕಂಪನ ಉಂಟಾಗಿರಬಹುದೆಂದು ಮನೆಯಿಂದ ಹೊರಗೆ ಬಂದಿದ್ದಾರೆ. ಅಲ್ಲದೇ ಅಕ್ಕಪಕ್ಕದವರೂ ಸಹ ತಮಗೂ ಅದೇ ರೀತಿ ಅನುಭವ ಆಗಿದ್ದನ್ನು ಹೇಳಿಕೊಂಡಿದ್ದು ಜನರು ಆತಂಕಗೊಂಡಿದ್ದಾರೆ.
ಜಿಲ್ಲಾಡಳಿತ ಸ್ಪಷ್ಟನೆ: ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ,ಯಲ್ಲಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಟಿವಿ ಮಾಧ್ಯಮಗಳಲ್ಲಿ ಪ್ರಚಾರಗೊಂಡ ಸಂದೇಶವು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ. ಜಿಲ್ಲಾಡಳಿತವು ಈ ಬಗ್ಗೆ ರಾಜ್ಯದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಕೋರಲಾಗಿ ಅಂತಹ ಯಾವುದೇ ಸಂದೇಶಗಳು ರಿಕ್ಟರ್ ಮಾಪಕದಲ್ಲಿ ದಾಖಲಾಗಿದ್ದು ಕಂಡುಬಂದಿಲ್ಲವಾಗಿ ತಿಳಿಸಿರುತ್ತಾರೆ. ಕಾರಣ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದಾಗಿ ಜಿಲ್ಲಾಡಳಿತವು ಸಾರ್ವಜನಿಕರಿಗೆ ಕೋರಿಕೊಂಡಿರುತ್ತದೆ.
ಸಾರ್ವಜನಿಕರು ಇಂತಹ ಯಾವುದೇ ಕಂಪನಗಳು ಅನುಭವಕ್ಕೆ ಬಂದಿದ್ದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ (1077) (08382229857) ಸಂಪರ್ಕಿಸ ಬಹುದಾಗಿ ಈ ಮೂಲಕ ತಿಳಿಸಿದೆ.