ಶ್ರೇಣಿಕೃತ ಸಮಾಜದ ಫಲಾನುಭವಿಗಳು ನೆಹರು ವಿರೋಧಿಗಳು- ಸಂತೋಷ್ ಶೆಟ್ಟಿ ಹಿರಿಯಡ್ಕ
ಉಡುಪಿ: ಸಂವಿಧಾನದ ಮೂಲ ಆಶಯಕ್ಕೆ ಬದ್ಧರಾಗಿ ಆಡಳಿತವನ್ನು ಮಾಡಿ ಈ ದೇಶಕ್ಕೆ ಭದ್ರ ಬುನಾದಿ ಹಾಕಿದ ನೆಹರೂರವರನ್ನು ವಿರೋಧಿಸುವ ಕೆಲಸ ಕಾರ್ಯ ಇಂದಿನ ದಿನಮಾನದಲ್ಲಿ ಜರಗುತಿದೆ. ಶ್ರೇಣಿಕೃತ ಸಮಾಜದ ವ್ಯವಸ್ಥೆಯಲ್ಲಿ ಲಾಗಾಯಿತಿನಿಂದ ಫಲಾನುಭವಿ ಆಗಿರುವ ವರ್ಗವೊಂದು ನೆಹರು ಅವರನ್ನು ನೆಹರೂ ಅವರ ವಿಚಾರಧಾರೆಯನ್ನು ವಿರೋಧಿಸುತ್ತಿದೆ. ಅವರ ದ್ವೇಷ ಇರೋದು ನೆಹರು ಒಪ್ಪಿಕೊಂಡ ಸಂವಿಧಾನದ ಮೇಲೆ .ಆದರೆ ಸಂವಿಧಾನವನ್ನು ನೇರವಾಗಿ ವಿರೋಧಿಸಿದರೆ ಕಾನೂನಾತ್ಮಕವಾಗಿ ಸಮಸ್ಯೆ ಬರಬಹುದು ಎಂಬ ಧೋರಣೆಯಿಂದ ನೆಹರೂರನ್ನು ವಿರೋಧಿಸುತ್ತಿದ್ದಾರೆ. ದೇಶ ಸ್ವತಂತ್ರ ಪಡೆಯುವಾಗ ಅತ್ಯಂತ ಬಡತನದಿಂದ ಕೂಡಿತ್ತು ಅದನ್ನು ಮುನ್ನಡೆಸುವ ಸವಾಲು ನೆಹರೂರವರ ಮೇಲಿತ್ತು. ಅವರು ಸಮರ್ಪಕವಾಗಿ ಆ ಸವಾಲನ್ನು ಎದುರಿಸಿ ಒಮ್ಮೆ ಹೋಳಾಗಿದ್ದ ದೇಶವನ್ನು ಮತ್ತೆ ಹೋಳಾಗದಂತೆ ವೈಜ್ಞಾನಿಕ ತಳಹದಿಯಲ್ಲಿ ದೇಶವನ್ನು ಕಟ್ಟಿದರು. ಅವರಿಗೆ ಸ್ಪಷ್ಟತೆ ಇತ್ತು ದೇಶವನ್ನು ವೈಜ್ಞಾನಿಕ ತಳಹದಿಯಲ್ಲಿ ಕಟ್ಟಿದರೆ ಮಾತ್ರ ದೇಶವನ್ನು ಮುನ್ನಡೆಸಬಹುದು ಎಂದು ಅದನ್ನು ಅವರು ಸಾಧಿಸಿದರು ಎಂದು ಖ್ಯಾತ ರಂಗಕರ್ಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸಂತೋಷ್ ಶೆಟ್ಟಿ ಹಿರಿಯಡ್ಕ ಅವರು ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನೆಹರು ಜಯಂತಿ – ಮಕ್ಕಳ ದಿನಾಚರಣೆಯ ಪ್ರಯುಕ್ತ ಜರಗಿದ ‘ನೆಹರೂ ಮತ್ತು ಪ್ರಜಾಪ್ರಭುತ್ವ’ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನುಡಿದರು.
ಅವರು ಮುಂದುವರೆಯುತ್ತಾ ದೇಶ ಸೇವೆ ಎಂದರೆ ಬಡತನದಲ್ಲಿ ನರಳುತ್ತಿರುವ ಲಕ್ಷಾಂತರ ಜನರನ್ನು ಬಡತನದ ರೇಖೆಯಿಂದ ಮೇಲಕ್ಕೆತ್ತುವುದು, ಶ್ರಮಿಕರಿಗೆ ಮತ್ತು ಮಹಿಳೆಯರಿಗೆ ಬದುಕುವ ಹಕ್ಕನ್ನು ನೀಡುವುದು ಎಂಬುದನ್ನು ಸ್ಪಷ್ಟವಾಗಿ ನೆಹರೂರವರು ಅರಿತಿದ್ದರು. ಇದು ನಮ್ಮ ಸಂವಿಧಾನದ ಆಶಯವು ಆಗಿತ್ತು. ಪಂಚವಾರ್ಷಿಕ ಯೋಜನೆಯ ಮೂಲಕ ಕೈಗಾರಿಕಗಳನ್ನು ಸ್ಥಾಪಿಸಿದ ನೆಹರೂರವರು ಯುವ ಜನತೆ ಕೈಗೆ ಉದ್ಯೋಗ ದೊರೆತರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದರು. ಇಂದು ದೇಶದ ವರಮಾನದಲ್ಲಿ 50 ಲಕ್ಷ ಕೋಟಿಯಷ್ಟು ಮೊತ್ತ ನೆಹರು ಸ್ಥಾಪಿಸಿದ ಕೈಗಾರಿಕೆಗಳಿಂದ ಬರುತ್ತಿದೆ. ಇಂದು ದೇಶ ತಾಂತ್ರಿಕವಾಗಿ ಬೆಳೆಯಲು ಮುಖ್ಯ ಕಾರಣ ಇಸ್ರೋ ಸ್ಥಾಪನೆ. ಇಸ್ರೋ ಸ್ಥಾಪನೆ ಕಾಲದಲ್ಲಿ ದೇಶ ಬಡತನದಲ್ಲಿತ್ತು. ಆ ಹೊತ್ತು ಸ್ಥಾಪಿಸಲು ಹೊರಟಾಗ ವಿದೇಶಿಗರು ಬಡತನದ ಈ ಹೊತ್ತಲ್ಲಿ ಬಾಹ್ಯಾಕಾಶ ಸಂಶೋಧನ ಕೇಂದ್ರ ಏಕೆ ಎಂದು ಟೀಕಿಸಿದ್ದರು .ಆದರೆ ಅದೇ ದೇಶಗಳು ಇಂದು ತಮ್ಮ ಉಪಗ್ರಹ ಉಡಾವಣೆಗೆ ನಮ್ಮ ದೇಶದ ನೆರವುಯಾಚಿಸುತ್ತಿದ್ದಾರೆ ಇದು ನೆಹರೂರವರ ದೂರಾಲೋಚನೆ .ದೇಶವನ್ನು ಸಂವಿಧಾನ ಬದ್ಧವಾಗಿ ವೈಜ್ಞಾನಿಕ ತಳಹದಿಯಲ್ಲಿ ನೆಹರೂರವರು ಕಟ್ಟಿದ್ದಾರೆ ಇದಕ್ಕೆ ವ್ಯತಿರಿಕ್ತವಾಗಿ ಈ ದೇಶ ಚಲಿಸಿದರೆ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಮುಕಾಂಬೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಮೂರ್ತಿ ಸಂದರ್ಭೋಚಿತವಾಗಿ ಮಾತನಾಡಿದರು.ಗೌರವಾಧ್ಯಕ್ಷ ನಾಗೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ‘ನೆಹರೂ ಮತ್ತು ಪ್ರಜಾಪ್ರಭುತ್ವ’ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ದೃಢಪತ್ರ ಮತ್ತು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸರಕಾರಿ ಪದವಿಪೂರ್ವ ಕಾಲೇಜಿನ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಂಸ್ಥೆಯ ವತಿಯಿಂದ ರೂಪಾಯಿ 25,000 ಸಹಾಯಧನವನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಲಾಯಿತು.
ಕರ್ನಾಟಕ ರಾಜ್ಯ ಸರಕಾರ ಬೆಂಗಳೂರಿನ ಜವಾಹರ್ ಲಾಲ್ ಪ್ಲಾನೆಟೋರಿಯಂನಲ್ಲಿ ಆಯೋಜಿಸಿದ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಗಳಾದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಮಾ. ಜಯದೇವ್ ಪೂಜಾರಿ ಮತ್ತು ಕು. ಹನಿ ಪಿ.ಶೆಟ್ಟಿ ಅವರಿಗೆ ನಗದು ಸಮೇತ ಸ್ಮರಣಿಕೆ ನೀಡಿ ಗೌರವಿಸಲಾಯಿತು
ಪ್ರಾರಂಭದಲ್ಲಿ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿ, ಉಪಾಧ್ಯಕ್ಷೆ ಹೆಲನ್ ಫೆರ್ನಾಂಡಿಸ್ ಮತ್ತು ಕಾರ್ಯದರ್ಶಿ ಆಶಾ ವಾಸು ವಿಜೇತರ ಪಟ್ಟಿಯನ್ನು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸುವೇಲ್ ರಹಮತುಲ್ಲ ವಂದಿಸಿದರು. ಮಾಜಿ ಅಧ್ಯಕ್ಷ ರಿಯಾಜ್ ಪಳ್ಳಿ ಕಾರ್ಯಕ್ರಮವನ್ನು ನಿರ್ವಹಿಸಿದರು.