ಚೇರ್ಕಾಡಿ: ರಾಷ್ಟ್ರೋತ್ಥಾನ ಪರಿಷತ್ ನ ಸಿಬಿಎಸ್ಇ ಶಾಲೆ ಆರಂಭ
ಉಡುಪಿ: ರಾಷ್ಟ್ರೋತ್ಥಾನ ಪರಿಷತ್‌ಗೆ 60 ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಿಬಿಎಸ್ಇ ಶಾಲೆಗಳನ್ನು ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದೆ.
ಇದರ ಭಾಗವಾಗಿ ಉಡುಪಿ ಜಿಲ್ಲೆಯ ಚೇರ್ಕಾಡಿಯಲ್ಲಿ ನೂತನ ಶಾಲೆ 2025ರ ಮೇ ಯಿಂದ ಕಾರ್ಯಾರಂಭವಾಗಲಿದೆ ಎಂದು ರಾಷ್ಟ್ರೋತ್ಥಾನ ಪರಿಷತ್ ನ ಪ್ರಧಾನ ಕಾರ್ಯದರ್ಶಿ ನಾರಾವಿ ದಿನೇಶ್ ಹೆಗ್ಡೆ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ 9 ಜಿಲ್ಲೆಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ ನ 14 ಸಿಬಿಎಸ್ಇ ಶಾಲೆಗಳಲ್ಲಿ 15 ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಮುಂದೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿಬಿಎಸ್ಇ ಶಾಲೆಗಳನ್ನು ಆರಂಭಿಸುವ ಯೋಜನೆ ಇದೆ ಎಂದರು.
ಚೇರ್ಕಾಡಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕದಿಂದ 8ನೇ ತರಗತಿಯವರೆಗೆ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮುಂದಿನ ವರ್ಷ ಎಪ್ರಿಲ್ 30 ರಂದು ಶಾಲಾ ಕಟ್ಟಡ ಉದ್ಘಾಟನೆಗೊಳ್ಳಲಿದ್ದು, ಮೇ ತಿಂಗಳಿನಿಂದ ಶಾಲೆ ಕಾರ್ಯಾರಂಭವಾಗಲಿದೆ.ಹುಡುಗ /ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ಥಾನೀಯ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಕಾರ್ಯದರ್ಶಿ ಋಷಿ ರಾಜ್, ರವಿ ಕುಮಾರ್, ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ್ ಉಪಸ್ಥಿತರಿದ್ದರು.