ಬಿಜೆಪಿ ಸೇರಲು ಎಸ್‍ಸಿಡಿಸಿಸಿ ಅಧ್ಯಕ್ಷ ರಾಜೇಂದ್ರ ಕುಮಾರ್ ಗೆ ಮತ್ತೊಮ್ಮೆ ಆಹ್ವಾನ
ಮಂಗಳೂರು: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ತಮ್ಮ ಪಕ್ಷ ಸೇರಿಕೊಳ್ಳುವಂತೆ ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಆಹ್ವಾನ ಕೊಟ್ಟಿದೆ.
ಮಂಗಳೂರಿನಲ್ಲಿ ನಡೆದ 67 ನೇ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಪಕ್ಷಕ್ಕೆ ಸೇರಲು ರಾಜೇಂದ್ರ ಕುಮಾರ್ ಅವರಿಗೆ ಮುಕ್ತ ಆಹ್ವಾನ ನೀಡಿದರು,”ಅವರು ಸಹಕಾರ ಕ್ಷೇತ್ರದಲ್ಲಿ ಹೆಚ್ಚಿನ ಎತ್ತರದ ಸ್ಥಾನ ಪಡೆಯಲು ಇದು ರಹದಾರಿಯಾಗಲಿದೆ” ಎಂದಿದ್ದಾರೆ.
ನಳಿನ್ ಕುಮಾರ್ ಕಟೀಲ್, ‘ರಾಜೇಂದ್ರ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಜನೌಷಧಿ ಮಳಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಅವರು ರಾಷ್ಟ್ರ ಮಟ್ಟದ ನಾಯಕ ಆಗಬೇಕು ಎಂಬುದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ನಮ್ಮೆಲ್ಲರ ಆಸೆ. ಆದರೆ, ಅದಕ್ಕಾಗಿ ಅವರು ನಮ್ಮ ಬಳಿ ಕುಳಿತು ಕೊಳ್ಳಬೇಕು. ಇದು ಬಹಿರಂಗವಾಗಿ ಚರ್ಚಿಸುವ ವಿಚಾರ ಅಲ್ಲ. ನಾನು ಅವರ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇನೆ’ ಎಂದು ಹೇಳಿ ಮುಗುಳ್ನಕ್ಕರು
ಕರ್ನಾಟಕ ರಾಜ್ಯ ಸಹಕಾರ ಒಕ್ಕೂಟದ ಪ್ರಸ್ತುತ ಅಧ್ಯಕ್ಷರೂ ಆಗಿರುವ 72 ವರ್ಷದ ರಾಜೇಂದ್ರ ಕುಮಾರ್ ಕಾಂಗ್ರೆಸ್ ಸದಸ್ಯರಾಗಿದ್ದಾರೆ ಮತ್ತು 2019 ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸ್ಥಾನದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ 27 ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿ ಸತತವಾಗಿ ಆಯ್ಕೆಯಾಗುವ ಮೂಲಕ ಅವರು ದಾಖಲೆ ನಿರ್ಮಿಸಿದ್ದಾರೆ.
ಕರಾವಳಿಯು ತನ್ನ ಭದ್ರಕೋಟೆಯಾಗಿದ್ದರೂ ಬಿಜೆಪಿಗೆ ಬ್ಯಾಂಕ್ ಚುನಾವಣೆಯಲ್ಲಿ ಯಶಸ್ಸನ್ನು ಸವಿಯಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗಿಂತ ಭಿನ್ನವಾಗಿ ಕರಾವಳಿಯ ಪಂಚಾಯತ್ ಚುನಾವಣೆಗಳಲ್ಲಿ ಕೇಸರಿ ಪಕ್ಷಕ್ಕೆ ದೊಡ್ಡ ಯಶಸ್ಸನ್ನು ಕಾಣಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ, ರಾಜೇಂದ್ರ ಕುಮಾರ್ ಅವರನ್ನು ಒಅಕ್ಷಕ್ಕೆ ಸೇರಿಸಿಕೊಳ್ಳುವುದರ ಹಿಂದೆ ಕೇವಲ ಪಂಚಾಯತ್ ಚುನಾವಣೆಗಳ ಗೆಲುವಷ್ಟೇ ಅಲ್ಲದೆ 2024 ರ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಮುನ್ನಡೆ ಸಾಧಿಸುವಲ್ಲಿ ಇದು ಸಹಾಕಾರಿಯಾಗಲಿದೆಎಂದು ಬಿಜೆಪಿ ನಂಬಿದೆ. 400 ಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಹೊಂದಿರುವ ಡಿಸಿಸಿ ಬ್ಯಾಂಕ್ ಗ್ರಾಮೀಣ ಪ್ರದೇಶಗಳಲ್ಲಿ ಬಲವಾದ ಜಾಲವನ್ನು ಹೊಂದಿದ್ದು, ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಈ ಸಿದ್ದತೆ ನಡೆಸಿದೆ.
ಇದೇ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ರಾಜೇಂದ್ರ ಕುಮಾರ್ ಅವರನ್ನು ಸಹಕಾರ ಕ್ಷೇತ್ರದ ದ್ರೋಣ ಎಂದು ಬಣ್ಣಿಸಿದರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಲು ಬೇಕಾದ ಎಲ್ಲಾ ಗುಣಲಕ್ಷಣಗಳೂ ಅವರಲ್ಲಿದೆ ಎಂದರು.