ಬೈಂದೂರು: 58 ವರ್ಷಗಳ ಹಳೆಯ ಅರಾಟೆ ಸೇತುವೆ ಶಿಥಿಲ- ಸಂಚಾರ ನಿರ್ಬಂಧ

ಕುಂದಾಪುರ: ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ-66ರ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ ಸೌಪರ್ಣಿಕಾ ನದಿಗೆ ಅಡ್ಡಲಾಗಿ 1966ರಲ್ಲಿ ನಿರ್ಮಿಸಿರುವ ಹಳೆಯ ಸೇತುವೆ ಶಿಥಿಲಗೊಂಡಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಚೆನ್ನೈ ಎಂ/ಎಸ್ ಅಸ್ಸಿಸ್ಟೆಮ್ ಇಂಡಿಯಾ ಲಿಮಿಟೆಡ್ ವತಿಯಿಂದ ನೇಮಿಸಲಾದ ತಜ್ಞರ ತಪಾಸಣಾ ವರದಿಯಲ್ಲಿ, ಸುಮಾರು 58 ವರ್ಷಗಳ ಹಳೆಯದಾದ ಈ ಸೇತುವೆಯು ಶಿಥಿಲಗೊಂಡಿದ್ದು, ವಾಹನ ಸಂಚಾರಕ್ಕೆ ಯೋಗ್ಯವಲ್ಲದೇ ಇರುವುದರಿಂದ ತಕ್ಷಣವೇ ವಾಹನ ಸಂಚಾರವನ್ನು ನಿಷೇಧಿಸುವ ಬಗ್ಗೆ ತಿಳಿಸಲಾಗಿದೆ. ಆದುದರಿಂದ ಅರಾಟೆ ಹಳೆ ಸೇತುವೆ ಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಅಲ್ಲೇ ಸಮೀಪದ ಹೊಸ ಸೇತುವೆಯಲ್ಲಿ ಸಂಚರಿಸಲು ಆದೇಶಿಸಲು ಕೋರಲಾಗಿದೆ.

ಅದರಂತೆ ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿ ರಿಸಿಕೊಂಡು ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989ರ ಕಲಂ 221(ಎ)(2) (5) ರನ್ವಯ ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ-66 ರ ಮುಳ್ಳಿಕಟ್ಟೆ ಸಮೀಪದ ಅರಾಟೆ ಹಳೆ ಸೇತುವೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಈ ಸೇತುವೆಯಲ್ಲಿ ಸಂಚರಿಸುವ ವಾಹನಗಳಿಗೆ ಪಕ್ಕದಲ್ಲೇ ಚತುಷ್ಪಥ ಹೆದ್ದಾರಿಯಲ್ಲಿ ನಿರ್ಮಾಣಗೊಂಡ ಹೊಸ ಸೇತುವೆಯಲ್ಲಿ ಬದಲೀ ಸಂಚಾರ ವ್ಯವಸ್ಥೆಯನ್ನು ಮಾಡಿ ಆದೇಶಿಸಿ ಡಿಸಿ ಡಾ. ಕೆ. ವಿದ್ಯಾ ಕುಮಾರಿ ಆದೇಶಿಸಿದ್ದಾರೆ.

ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಕನ್ನಡಕುದ್ರು (ಮೂವತ್ತು ಮುಡಿ) ಕ್ರಾಸ್ ಬಳಿಯಿಂದ ಅರಾಟೆಯವರೆಗೆ ಹಳೆಯ ಸೇತುವೆ ಇರುವ ಭಾಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪಕ್ಕದಲ್ಲೇ ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಾಣಗೊಂಡ ಹೊಸ ಸೇತುವೆಯಲ್ಲಿಯೇ ಎರಡೂ ಕಡೆಗಳ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕುಂದಾಪುರದಿಂದ ಸಂಚರಿಸುವವರುವ ಕನ್ನಡಕುದ್ರು ಬಳಿಯಿಂದ ಅರಾಟೆಯವರೆಗೆ ಎಡ ಭಾಗದ ಹೊಸ ಹೆದ್ದಾರಿಯಲ್ಲಿಯೇ ಸಂಚರಿಸಬೇಕು. ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಹೊಸ ಸೇತುವೆಯಲ್ಲಿಯೇ ಎರಡೂ ಕಡೆಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕುಂದಾಪುರ ಭಾಗದಲ್ಲಿಯೇ ಇದು ಅತೀ ಉದ್ದದ ಸೇತುವೆಯಾಗಿದ್ದು, 615 ಮೀಟರ್ ಉದ್ದವಿದೆ. ಕಳೆದ ಮಳೆಗಾಲದಲ್ಲಿ ಈ ರಾ.ಹೆ. 66ರ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿಗೆ ನಿರ್ಮಿಸಲಾಗಿದ್ದ ಹಳೆಯ ಸೇತುವೆಯು ಕುಸಿದು ಬಿದ್ದು, ಸಂಪರ್ಕವೇ ಕಡಿತಗೊಂಡಿತ್ತು. ಆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅರಾಟೆಯ ಈ ಹಳೆಯ ಸೇತುವೆ ಸಹಿತ ಬೇರೆ ಬೇರೆ ಹಳೆ ಸೇತುವೆಗಳ ಸಾಮರ್ಥ್ಯ ವರದಿ ಪಡೆಯಲಾಗಿದೆ ಎನ್ನಲಾಗುತ್ತಿದೆ.

ವಾಹನ ಸವಾರರೇ ಎಚ್ಚರ…

ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಪ್ರತಿನಿತ್ಯ ಬಸ್‌ಗಳು, ಸರಕು ಸಾಗಾಟದ ಘನ ವಾಹನಗಳು ಸೇರಿದಂತೆ ಲಘು ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುತ್ತಿರುತ್ತವೆ. ಮುಂದಿನ ಆದೇಶದವರೆಗೆ ಹೊಸ ಹೆದ್ದಾರಿಯ ಒಂದೇ ಮಾರ್ಗದಲ್ಲಿ ಎರಡೂ ಕಡೆಗಳ ವಾಹನಗಳನ್ನು ಬಿಡಲಾಗಿದ್ದು, ಒಂದೆರಡು ದಿನದಲ್ಲಿಯೇ ಸುಲಭ ಸಂಚಾರಕ್ಕೆ ಮಾರ್ಗ ಮಧ್ಯೆ ಅಳವಡಿಸಿದ ರಿಪ್ಲೆಕ್ಟರ್ ಕೋನ್ ಹಾನಿಗೀಡಾಗಿದೆ.

ಸೇತುವೆ ಆರಂಭದಿಂದ ವಾಹನಗಳನ್ನು ತಿರುವು ಪಡೆದು ಇನ್ನೊಂದು ಭಾಗದಲ್ಲಿ ಹೆದ್ದಾರಿಗೆ ಜೋಡಿಸಿಕೊಳ್ಳುವ ಸುಮಾರು ಮೀಟರ್ ಅಂತರದ ಸಂಚಾರ ನಿಜಕ್ಕೂ ತ್ರಾಸದಾಯಕವಾಗಿದೆ. ವಾಹನ ಸವಾರರು ವೇಗದ ಸಂಚಾರ, ಓವರ್ ಟೇಕ್ ಮಾಡದಂತೆ ಎಚ್ಚರ ವಹಿಸಬೇಕಾಗಿದೆ. ಸೇತುವೆಯಲ್ಲಿ ಬೆಳಕಿನ ವ್ಯವಸ್ಥೆಯೂ ಇಲ್ಲದಿರುವುದರಿಂದ ರಾತ್ರಿ ವೇಳೆ ಅಪಘಾತ ಸಂಭವಿಸದಂತೆ, ಜಾಗರೂಕತೆಯಿಂದ ಸಂಚರಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!