ಹಳ್ಳಿಯಲ್ಲಿ ಅಸ್ಪೃಶ್ಯತೆ, ದಬ್ಬಾಳಿಕೆ ಇನ್ನೂ ಜೀವಂತ: ಶ್ಯಾಮರಾಜ್ ಬಿರ್ತಿ
ಬ್ರಹ್ಮಾವರ: ವಿದ್ಯಾವಂತರ ಜಿಲ್ಲೆಯೆಂದು ಕರೆಸಿಕೊಳ್ಳುವ ಉಡುಪಿ ಜಿಲ್ಲೆಯ ಹಳ್ಳಿ ಹಳ್ಳಿಯ ಭಾಗಗಳಲ್ಲಿ ಅಸ್ಪೃಶ್ಯತೆ, ದಬ್ಬಾಳಿಕೆ, ದೌರ್ಜನ್ಯಗಳು ಇನ್ನೂ ಜೀವಂತವಾಗಿವೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಹೇಳಿದರು.
ಅವರು ಮಂಗಳವಾರ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿಯ ದ.ಸಂ.ಸ.ಅಂಬೇಡ್ಕರ್ ವಾದ ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತಿದ್ದರು. ಬಿಲ್ಲಾಡಿ ಶಾಖೆ ಉದ್ಘಾಟನೆಯ ಪ್ರಸ್ತಾವಿಕ ನುಡಿಗಳನ್ನಾಡಿದ ದ.ಸಂ.ಸ. ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಮಾತನಾಡಿ ದಲಿತ ಸಂಘರ್ಷ ಸಮಿತಿಯ ಹೋರಾಟ ಅಂದ್ರೆ ಅದು ಈ ಸಮಾಜದ ಶೋಷಿತರ, ನಿರ್ಗತಿಕರ ಪರವಾದ ಹೋರಾಟ. ಇಲ್ಲಿ ಯಾವುದೇ ಸ್ವಹಿತಾಸಕ್ತಿಗೆ ಅವಕಾಶ ಇಲ್ಲ. ನಮ್ಮ ಭೀಮ ಸೇನಾನಿಗಳು ಮೈಯೆಲ್ಲಾ ಕಣ್ಣಾಗಿ ಸಮಾಜದಲ್ಲಿ ನಮಗಾಗುವ ಅನ್ಯಾಯದ ವಿರುದ್ಧ ಸಿಡಿದೇಳಬೇಕು. ಶೋಷಣೆ ಮತ್ತು ದೌರ್ಜನ್ಯವನ್ನು ಖಂಡಿಸಿ ದಮನಿತರ ಧ್ವನಿಯಾಗಬೇಕು ಎಂದರು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಬಿಲ್ಲಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಪ್ರಥ್ವಿರಾಜ್ ಹೆಗ್ಡೆಯವರು ಉದ್ಘಾಟಿಸಿದರು. ತಾಲೂಕು ಪಂಚಾಯತ್ ಸಧಸ್ಯರಾದ ನಿರ್ಮಲ ಶೆಟ್ಟಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ತಾಲೂಕು ಸಂಚಾಲಕ ವಡ್ಡರ್ಸೆ ಶ್ರೀನಿವಾಸ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ನ ಮಾಜಿ ಸದಸ್ಯರಾದ ಪ್ರವೀಣ್ ಶೆಟ್ಟಿ ವಂಡಾರು, ಚಂದ್ರಶೇಖರ್ ಶೆಟ್ಟಿ ಬಿಲ್ಲಾಡಿ. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಜಿಲ್ಲಾ ಸಮಿತಿಯ ಸದಸ್ಯರಾದ ಕುಮಾರ್ ಕೋಟ ಹರೀಶ್ಚಂದ್ರ ಬಿರ್ತಿ, ರಾಜು ಬೆಟ್ಟಿನಮನೆ, ಸುಧಾಕರ ಮಾಸ್ಟರ್ ಗುಜ್ಜರಬೆಟ್ಟು, ಶಿವಾನಂದ ಬಿರ್ತಿ ಆಗಮಿಸಿದ್ದರು. ಪ್ರಶಾಂತ್ ಬಿರ್ತಿ ಮತ್ತು ತಂಡದವರಿಂದ ಹೋರಾಟದ ಗೀತೆಗಳನ್ನು ಹಾಡಲಾಯಿತು. ಗೌರಿ ಬಿಲ್ಲಾಡಿ ಅವರನ್ನು ಬಿಲ್ಲಾಡಿ ಶಾಖೆಯ ಮಹಿಳಾ ಸಂಚಾಲಕಿಯವರಾಗಿ ಆಯ್ಕೆ ಮಾಡಲಾಯಿತು. ಚಂದ್ರ ಕೊರ್ಗಿ ಸ್ವಾಗತಿಸಿ, ಶ್ರೀನಿವಾಸ ಮಲ್ಯಾಡಿ ವಂದಿಸಿದರು.