ಸಂವಿಧಾನದಿಂದ ಆಡಳಿತದ ಚುಕ್ಕಾಣಿ ಹಿಡಿವರೇ ಸಂವಿಧಾನ ಬದಲಾವಣೆ ಬಯಸುತ್ತಿದ್ದಾರೆ-ನಿಕೇತ್ ರಾಜ್ ಮೌರ್ಯ
ಕಾಪು: ನಮ್ಮ ಧಾರ್ಮಿಕ ಕ್ಷೇತ್ರಗಳು ಅಪಾಯದಲ್ಲಿದೆ ಎಂದರೆ ಅಸಮಾಧಾನಗೊಳ್ಳುವ ನಾವು, ಸಂವಿಧಾನದ ಬಗೆಗೂ ಚಿಂತಿಸಬೇಕಾಗಿದೆ ಎಂದು ವಾಗ್ಮಿ ನಿಕೇತ್ ರಾಜ್ ಮೌರ್ಯ ಹೇಳಿದರು.
ಅವರು ಇಂದು ಸಂಜೆ ರಕ್ಷಣಾಪುರ ಜವನೆರ್ ಕಾಪು ಇದರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಸಂವಿಧಾನ ಉಳಿಸಿ ಬೃಹತ್ ಜಾಥ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಂವಿಧಾನ ಅಪಾಯದಲ್ಲಿದೆ, 5 ಸಾವಿರ ವರ್ಷಗಳಿಂದ ಇರುವ ನಮ್ಮ ಮನುಸ್ಮೃತಿ ಆಡಳಿತಕ್ಕೆ ತಿಲಾಂಜಲಿಯಿಟ್ಟು ಪ್ರಸ್ತುತ ನಾವು ಬದುಕುತ್ತಿರುವುದು ನಮ್ಮ ಸಂವಿಧಾನದ ಶಕ್ತಿಯಿಂದಾಗಿ. ಸಂವಿಧಾನದಿಂದ ಆಡಳಿತದ ಚುಕ್ಕಾಣಿ ಹಿಡಿವರೇ ಸಂವಿಧಾನ ಬದಲಾವಣೆ ಬಯಸುತ್ತಿದ್ದಾರೆ. ಕನಸನ್ನು ಕೊಟ್ಟ ಗ್ರಂಥ ಸಂವಿಧಾನ ಎಂದೂ ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡ ಸುಧೀರ್ ಮರೋಳಿ ಮಾತನಾಡಿ, ಸರ್ವರೂ ಸಮಾನರು ಎನ್ನುವ ಸಂವಿಧಾನ ನಮ್ಮದು. ಕೆಲವರಿಗೆ ಗೌರವ ಕೊಡುವ ಸಂವಿಧಾನ ಬೇಡ. ಎಲ್ಲರಿಗೂ ಗೌರವ ನೀಡುವ ಸಂವಿಧಾನ ಬೇಕಾಗಿದೆ. ಪೋಲಿಸ್ ವರಿಷ್ಠಾಧಿಕಾರಿಯ ವಿರುದ್ಧ ಉಡುಪಿಯ ಶಾಸಕರುಗಳು ಸಾಮಾನ್ಯ ಜನರ ಎದುರು ಯಾಕೆ ಪ್ರತಿಭಟಿಸುವಿರಿ? ವಿಧಾನ ಸೌಧದಲ್ಲಿ ಪ್ರಶ್ನಿಸಿ ನಿಮಗೆ ಸಂವಿಧಾನ ಆ ಹಕ್ಕನ್ನು ನೀಡಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಸಮಾನತೆ ಬೋಧಿಸಿದ ಸಂವಿಧಾನದ ಮೌಲ್ಯವನ್ನು ಮರೆತಿದ್ದೇವೆ. ಇಂದಿನ ಸಭೆ ಅದಕ್ಕೆ ಪುನರ್ ಚಾಲನೆ ದೊರೆತಂತಾಗಿದೆ. ನಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗೋಣ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ರಕ್ಷಣಾಪುರ ಜವನೆರ್ ಅಧ್ಯಕ್ಷರಾದ ನವೀನ್ ಎನ್ ಶೆಟ್ಟಿ, ಧರ್ಮಗುರುಗಳಾದ ವಿಲಿಯಂ ಮಾರ್ಟಿಸ್, ಶ್ರೀನಿವಾಸ ತಂತ್ರಿ ಮತ್ತು ಇರ್ಶಾದ್ ಸಅದಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸುಂದರ ಮಾಸ್ತರ್, ಆನಂದ ಬ್ರಹ್ಮಾವರ, ಪ್ರಮುಖರಾದ ಕಿಶನ್ ಹೆಗ್ಢೆ ಕೊಳ್ಕೆಬೈಲು, ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್ ಪಕ್ಕಾಲು, ಶಾಂತಲತಾ ಶೆಟ್ಟಿ, ಶೇಖರ್ ಹೆಜಮಾಡಿ, ಗೀತಾ ವಾಗ್ಲೆ, ವೆರೋನಿಕಾ ಕರ್ನೆಲಿಯೋ, ಶರ್ಪುದ್ದೀನ್ ಶೇಖ್, ಶಿವಾಜಿ ಸುವರ್ಣ, ಹರೀಶ್ ಕಿಣಿ, ರಮೇಶ್ ಕಾಂಚನ್, ಕಾಪು ದಿವಾಕರ ಶೆಟ್ಟಿ, ದಿನಕರ ಹೇರೂರು ಮೊದಲಾದವರು ಉಪಸ್ಥಿತರಿದ್ದರು. ಸಭೆಗೂ ಮುನ್ನ ಕಾಪು ಜನಾರ್ಧನ ದೇಗುಲ ಆವರಣದಿಂದ ಕಾಪು ಪೇಟೆಯವರೆಗೆ ಸಾವಿರಾರು ಜನರಿಂದ ಜಾಥ ನಡೆಯಿತು. ಇದೇ ಸಂದರ್ಭ ಮೂರು ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸಂವಿಧಾನ ದಿನದ ಪ್ರಯುಕ್ತ ಸೀರೆ ಕೊಡುಗೆಯಾಗಿ ನೀಡಲಾಯಿತು.