ಪಿಂಚಣಿ ಹಣಕ್ಕೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ- ಆರೋಪಿಗಳಿಗೆ ಜಾಮೀನು
ಉಡುಪಿ: ನಿವೃತ್ತ ಶಿಕ್ಷಕರಿಗೆ ಪಿಂಚಣಿ ಹಣವನ್ನು ಬಿಡುಗಡೆಗೊಳಿಸಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಆರೋಪಿಗಳಾದ ಉಡುಪಿ ಖಜಾನೆಯ ಪ್ರಭಾರ ನಿರ್ದೇಶಕ ರವಿಕುಮಾರ್ ಎಚ್ ಮತ್ತು ಎಫ್.ಡಿ.ಎ ರಾಘವೇಂದ್ರರವರಿಗೆ ಉಡುಪಿಯ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
ನಿವೃತ್ತ ಶಿಕ್ಷಕ ಹಿತೇಂದ್ರ ಭಂಡಾರಿ ಎಂಬವರು ತಮ್ಮ ಪೆನ್ಶನ್ ಹಣವನ್ನು ಪಡೆಯಲು ಕಳೆದ 5 ತಿಂಗಳಿನಿಂದ ಖಜಾನೆಯ ಪ್ರಭಾರ ನಿರ್ದೇಶಕರಾದ ರವಿಕುಮಾರ್ ಮತ್ತು ಸಹಾಯಕ ರಾಘವೇಂದ್ರ ಎಂಬವರು ಸತಾಯಿಸುತ್ತಿದ್ದು ರೂ 5000 ಲಂಚ ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಹಿತೇಂದ್ರ ಭಂಡಾರಿಯವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಹಿತೇಂದ್ರ ಭಂಡಾರಿಯವರ ದೂರನ್ನು ಆಧರಿಸಿ ನ.16 ರಂದು ಲೋಕಾಯುಕ್ತ ತಂಡವು ಆರೋಪಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದರು. ಆರೋಪಿಗಳ ಪರವಾಗಿ ಕುಂದಾಪುರ ನ್ಯಾಯವಾದಿ ಪಿ.ಜಯಚಂದ್ರ ಶೆಟ್ಟಿ ಮತ್ತು ಉಡುಪಿ ನ್ಯಾಯವಾದಿ ಕ್ಲಿಂಟನ್.ಡಿ.ಸಿಲ್ವಾ, ನಂದಾ ಶೆಟ್ಟಿ ವಾದಿಸಿದ್ದಾರೆ.