ಉಡುಪಿ: ‘ಮೈಂಡ್ ಮಿಸ್ಟರಿ’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಉಡುಪಿ: ದೇಶ ವಿದೇಶಗಳಲ್ಲಿ ಜಾದೂ ಪ್ರದರ್ಶಿಸಿ ಜನಮನ್ನಣೆ ಗಳಿಸಿರುವ ಕುದ್ರೋಳಿ ಗಣೇಶ್ ಅವರಿಂದ ಡಿ.21 ಮತ್ತು 22ರಂದು ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಮೈಂಡ್ ಮಿಸ್ಟರಿ ಸುಪ್ತ ಮನಸ್ಸಿನ ನಶಕ್ತಿಯ ಅನಾವರಣ ಕಾರ್ಯಕ್ರಮದ ಪೋಸ್ಟರ್‌ನ್ನು ಉದ್ಯಮಿ ಜಿ.ಶಂಕರ್ ಅಂಬಲಪಾಡಿಯ ಮಿನಿ ಸಭಾಂಗಣದಲ್ಲಿ ಸೋಮವಾರ ಬಿಡುಗಡೆ ಗೊಳಿಸಿದರು.

ಡಾ.ಜಿ.ಶಂಕರ್ ರವರು ಮಂತ್ರದಂಡವನ್ನು ತಟ್ಟಿದಾಗ ಬರಿದಾದ ಪೆಟ್ಟಿಗೆಯಲ್ಲಿ ಚಿಮ್ಮಿದ ರಿಬ್ಬನ್ ರಾಶಿಯಲ್ಲಿ  ಪೋಸ್ಟರ್ ಮೂಡಿಬಂತು. 

ಬಳಿಕ ಮಾತನಾಡಿದ ಅವರು ಸದಾ ಹೊಸತನಗಳ ಮೂಲಕ ಜನಪ್ರಿಯರಾಗಿರುವ ಕುದ್ರೋಳಿ ಗಣೇಶ್ ಅಂತರರಾಷ್ಟ್ರೀಯವಾಗಿ ಚರ್ಚೆಯಲ್ಲಿರುವ ಮೆಂಟಲಿಸಮ್ ಕಲೆಯಲ್ಲಿ ನಿಪುಣರಾಗಿ ಈ ಕಲೆಯಲ್ಲಿ ಪಳಗಿರುವುದು ಮೆಚ್ಚತಕ್ಕ ವಿಚಾರ. ಈ ಕಲಾ ಪ್ರದರ್ಶನದ ಪ್ರಥಮ ಸಾರ್ವಜನಿಕ ಪ್ರದರ್ಶನವನ್ನು ಉಡುಪಿಯಲ್ಲಿ ಹಮ್ಮಿಕೊಂಡಿದ್ದು ಪ್ರೇಕ್ಷಕರಿಗೆ ಹೊಸ ಅನುಭವ ಸಿಗಲಿ ಎಂದು ಶುಭ ಹಾರೈಸಿದರು.

ಜಾದೂಗಾರ ಕುದ್ರೋಳಿ ಗಣೇಶ್ ಕಾರ್ಯಕ್ರಮದ ವಿಶೇಷತೆಯ ಬಗ್ಗೆ ವಿವರಿಸಿದರು. ಮೈಂಡ್ ರೀಡಿಂಗ್, ಟೆಲಿಪತಿ , ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್, ಸಮ್ಮೊಹಿನಿ ಮುಂತಾದ ಸುಪ್ತ ಮನಸ್ಸಿನ ಶಕ್ತಿಯ ರಂಗ ರೂಪಾತ್ಮಕ ಪ್ರಯೋಗವೇ ಮೈಂಡ್ ಮಿಸ್ಟರಿ. ಆಸ್ಟ್ರೇಲಿಯಾ, ಕಿನ್ಯಾ, ದುಬಾಯಿ, ಕತಾರ್ ಮುಂತಾದ ದೇಶಗಳಲ್ಲಿ ಈ ಪ್ರಯೋಗ ನೀಡಿದ್ದು ಇದೇ ಮೊದಲ ಪಾಲಿಗೆ ಉಡುಪಿಯಲ್ಲಿ ಸಾರ್ವಜನಿಕ ಪ್ರದರ್ಶನ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕುದ್ರೋಳಿ ಗಣೇಶ್ ರವರು ಪ್ರದರ್ಶಿಸಿದ ಮೆಂಟಲಿಸಮ್ ಕಲೆಯ ಹಲವು ಪ್ರಾತ್ಯಕ್ಷಿತೆ ವೀಕ್ಷಿಸಿ ನೆರೆದಿದ್ದ ಪರ್ತಕರ್ತರು ಬೆರಗಾದರು.

ಕಾರ್ಯಕ್ರಮದ ಸಂಯೋಜಕರಾದ ವಿಕ್ರಂ ಶೆಟ್ಟಿ ಸ್ವಾಗತಿಸಿದರು. ಮೊದಲನೆ ದಿನ ಸಂಜೆ 6.30 ಕ್ಕೆ ಹಾಗೂ ಎರಡನೇ ದಿನ ಮಧ್ಯಾಹ್ನ 3.30 ಕ್ಕೆ ಹಾಗೂ ಸಂಜೆ 6.30 ಕ್ಕೆ ಹೀಗೆ ಎರಡು ದಿನದಲ್ಲಿ ಮೂರು ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಮೆಂಟಲಿಸಮ್ ಕಲೆಯ ವೀಕ್ಷಣೆಗೆ ಬೇಕಾಗಿರುವ ಏಕಾಗ್ರತೆ ಹಾಗೂ ಗಂಬೀರತೆಯನ್ನು ಪರಿಗಣಿಸಿ ಕಾರ್ಯಕ್ರಮದ ಪ್ರವೇಶವು 16 ವರ್ಷ ಮೇಲ್ಪಟ್ಟ ಪ್ರೇಕ್ಷಕರಿಗೆ ಮಾತ್ರ ಇರುತ್ತದೆ ಎಂದು ಸೂಚನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!