ಬಾಳೆಕುದ್ರು ಮಠಕ್ಕೆ ತರಾತುರಿಯಲ್ಲಿ ಉತ್ತರಾಧಿಕಾರಿ ನೇಮಕಕ್ಕೆ ಯತ್ನ- ಸರಕಾರ ಮಧ್ಯ ಪ್ರವೇಶಕ್ಕೆ ಆಗ್ರಹ
ಉಡುಪಿ, ನ.23: ರಾಜ್ಯದ ಪ್ರಾಚೀನ ಮಠಗಳಲ್ಲಿ ಒಂದಾದ ಹಂಗಾರಕಟ್ಟೆ ಬಾಳೆಕುದ್ರು ಮಠಕ್ಕೆ ತರಾತುರಿಯಲ್ಲಿ ಉತ್ತರಾಧಿಕಾರಿಯನ್ನು ನೇಮಿಸಲು, ಮಠಕ್ಕೆ ಸಂಬಂಧ ಪಡದ ಕೆಲವರು ಪ್ರಯತ್ನಿಸುತ್ತಿದ್ದು, ಸರಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಈ ಪ್ರಯತ್ನವನ್ನು ತಡೆಯಬೇಕೆಂದು ಬಾಳೇಕುದ್ರು ಶ್ರೀ ಮಠ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಶಿವರಾಮ ಉಡುಪ ಸಾಲಿಗ್ರಾಮ, ಮಠದ ಪೀಠಾಧಿಪತಿ ಶ್ರೀನೃಸಿಂಹಾಶ್ರಮ ಸ್ವಾಮೀಜಿ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದನ್ನೇ ನೆಪವಾಗಿಟ್ಟುಕೊಂಡು ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ. ಈ ಸಂಬಂಧ ನ.16ರಂದು ಬೆಂಗಳೂರಿನಲ್ಲಿ ಗೌಪ್ಯ ಸಭೆ ನಡೆಸಿ, ಮಠದ ಸಂಪ್ರದಾಯಕ್ಕೆ ಸಂಬಂಧಪಡದ ಮತ್ತು ಪೀಠಾಧಿಪತಿಯಾಗಲು ಯಾವ ಅರ್ಹತೆಯೂ ಇರದ ವ್ಯಕ್ತಿಯೊಬ್ಬರನ್ನು ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ ಎಂದು ದೂರಿದರು.
ಸಮಿತಿಯು ಈಗಾಗಲೇ ಉತ್ತರಾಧಿಕಾರಿಯ ನೇಮಕಕ್ಕೆ ಘನ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರೂ ಇದನ್ನು ಧಿಕ್ಕರಿಸಿರುವ ಕೆಲವರು, ಹರಿಹರಪುರದ ಶ್ರೀಆದಿಶಂಕರಾಚಾರ್ಯ ಶಾರದ ಲಕ್ಷ್ಮೀನರಸಿಂಹ ಪೀಠದ ಪೀಠಾಧೀಶ್ವರ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿ ಮತ್ತು ಬೆಂಗಳೂರಿನ ಕೈಲಾಸಾಶ್ರಮ ಮಹಾಸಂಸ್ಥಾನದ ಜಯೇಂದ್ರಪುರೀ ಸ್ವಾಮಿಗಳಿಗೆ ತಪ್ಪುಮಾಹಿತಿಯನ್ನು ನೀಡಿ, ಅವರ ಸಮ್ಮುಖದಲ್ಲಿಯೇ ಉತ್ತರಾಧಿಕಾರಿಯನ್ನು ನೇಮಿಸಿರುವುದು, ದೇಶದ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ ಎಂದು ಅವರು ಆರೋಪಿಸಿದರು.
ಈ ನೇಮಕಕ್ಕೆ ಶೃಂಗೇರಿ ಮಠದ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಮಠದ ಭಕ್ತರ ಹಾಗೂ ಶಿಷ್ಯವರ್ಗದವರ ದಿಕ್ಕು ತಪ್ಪಿಸಲಾಗುತ್ತಿದೆ. ಕಳೆದ ಎರಡು ದಶಕಗಳಿಂದ ಮಠದಲ್ಲಿ ಹಣಕಾಸಿನ ಅವ್ಯವಹಾರ, ಸಂಪ್ರದಾಯ ಭಂಗ ಆಗಿರುವ ಕುರಿತು ಆರೋಪಗಳಿವೆ. ನಿತ್ಯಾನಂದ ಎಂಬ ಸ್ವಯಂಘೋಷಿತ ಮೀಮಾಂಸಕನ ಪಾಳೇಗಾರಿಕೆಯಿಂದ ಇಲ್ಲಿ ಅನೇಕ ನಡೆಯಬಾರದ ಕೆಲಸ-ಕಾಮಗಾರಿಗಳು ನಡೆದಿವೆ ಎಂದು ಅವರು ದೂರಿದರು. ಬಾಳೆಕುದ್ರುವಿನಲ್ಲಿ ವ್ಯವಸ್ಥಿತವಾದ ಮಠ ಇದ್ದರೂ, ಬೆಂಗಳೂರಿನಲ್ಲಿ ತರಾತುರಿಯಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ, ಘೋಷಿಸುವ ಸಭೆ ಹಾಗೂ ಶಿಷ್ಯಸ್ವೀಕಾರ ಸಮಾರಂಭವನ್ನು ನಡೆಸಲಾಗಿದೆ. ಇದರ ಹಿಂದೆ ಕೆಲವರ ಕುತಂತ್ರವಿರುವುದು ಸ್ಪಷ್ಟವಾಗಿದೆ. ಹರಿಹರಪುರ ಮಠವು ಬಾಳೆಕುದ್ರು ಮಠದ ಮೇಲೆ ಹಿಡಿತ ಸಾಧಿಸಲು ಮತ್ತು ಇದನ್ನು ತಮ್ಮ ಮಠದ ಪರಂಪರೆಗೆ ಸೇರಿಸಿಕೊಳ್ಳಲು ಉದ್ದೇಶಿಸಿದ್ದು, ಅವರೂ ಕೂಡ ಅನಾವಶ್ಯಕವಾಗಿ ಈ ವಿವಾದಕ್ಕೆ ಹಾಗೂ ಗೊಂದಲಕ್ಕೆ ಕಾರಣರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ವೇದಮೂರ್ತಿ ಹೃಷಿಕೇಷ ಬಾಯರಿ, ಕಾರ್ಯದರ್ಶಿ ಮಂಜುನಾಥ ಭಟ್, ಸದಸ್ಯರಾದ ಸುರೇಶ್ ಅಡಿಗ, ಗೋಪಾಲಕೃಷ್ಣ ಮಾಬುಕಳ ಉಪಸ್ಥಿತರಿದ್ದರು.
‘ಮಠದ ಆಸ್ತಿ ಮೇಲೆ ಕಣ್ಣು’
ಬಾಳೇಕುದ್ರು ಮಠವು ಐರೋಡಿ, ಕೋಡಿ, ನೀಲಾವರ, ಚೇರ್ಕಾಡಿ,ವಡ್ದರ್ಸೆ,ಹಾನೇಹಳ್ಳಿ, ಬಳ್ಕೂರು,ಕಂದಾವರ, ಹುತ್ತೂರು, ಅಂಜಾರು ಇತ್ಯಾದಿ ಗ್ರಾಮಗಳಲ್ಲಿ ಆಸ್ತಿಯನ್ನು ಹೊಂದಿರುವುದಾಗಿ ಹೇಳಲಾಗಿದೆ. ಅಲ್ಲದೇ ಅನೇಕ ಶಿಷ್ಯರು ಹಾಗೂ ಭಕ್ತರು ಇತ್ತೀಚೆಗೆ ಅಪಾರವಾದ ಆಸ್ತಿ-ಸಂಪತ್ತನ್ನು ಮಠಕ್ಕೆ ಕಾಣಿಕೆಯಾಗಿ ಒಪ್ಪಿಸಿದ್ದಾರೆ. ಇದರ ಮೇಲೆ ಕಣ್ಣಿಟ್ಟಿರುವ ಕೆಲವರು ಮಠಕ್ಕೆ ಅರ್ಹತೆ, ವಿದ್ವತ್ತು ಇಲ್ಲದ, ಮಠದ ಸಂಪ್ರದಾಯಕ್ಕೆ ಸಲ್ಲದ, ವ್ಯಕ್ತಿಯೋರ್ವರನ್ನು ಉತ್ತರಾಧಿಕಾರಿಯಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ಶಿವರಾಮ ಉಡುಪ ಸಾಲಿಗ್ರಾಮ ಆರೋಪಿಸಿದರು. ಇದನ್ನು ಮಠದ ಶಿಷ್ಯರು ಹಾಗೂ ಸದ್ಭಕ್ತರೆಲ್ಲರೂ ವಿರೋಧಿಸಬೇಕು ಮತ್ತು ಈ ಪ್ರಯತ್ನವನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.