ಆಧಾರ್ ತಿದ್ದುಪಡಿ ಹಾಗೂ ನೋಂದಣಿ ಮತ್ತುಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ನೇತೃತ್ವದಲ್ಲಿ ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲೆ, ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಅಂಚೆ ಜನಸಂಪರ್ಕ ಅಭಿಯಾನ ಅಡಿಯಲ್ಲಿ ಆಧಾರ್ ತಿದ್ದುಪಡಿ ಮತ್ತು ಹೊಸ ನೋಂದಣಿ ಶಿಬಿರ ಹಾಗೂ ಸಿ.ಎಸ್.ಐ ಲಂಬಾರ್ಡ್ ಮೆಮೋರಿಯಲ್ (ಮಿಷನ್ ಆಸ್ಪತ್ರೆ) ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಜರಗಿತು.
ಉಡುಪಿ ವಿಭಾಗದ ಅಂಚೆ ಅಧೀಕ್ಷಕರಾದ ರಮೇಶ್ ಪ್ರಭುರವರು ಅತಿಥಿಗಳೊಡಗೂಡಿ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ದಕ್ಷಿಣ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠ್ಠಲ ಭಟ್ ಪ್ರಸ್ತಾವನೆಗೈದರು. ಉದ್ಘಾಟನಾ ಸಮಾರಂಭವು ಬಡಗಬೆಟ್ಟು ಸೊಸೈಟಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆಯ ಸದಸ್ಯರಾದ ರಮೇಶ್ ಕಾಂಚನ್, ಮಿಷನ್ ಆಸ್ಪತ್ರೆಯ ಸೀನಿಯರ್ ಮೆಡಿಕಲ್ ಆಫೀಸರ್ ಡಾ. ಗಣೇಶ್ ಕಾಮತ್, ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಹೆಲೆನ್ ವಿ ಸಾಲಿನ್ಸ್, ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ವೇತಾ ಶ್ರೀನಿವಾಸ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಜಾರ್ಜ್ ಸಾಮ್ಯುವೆಲ್ ಉಪಸ್ಥಿತರಿದ್ದರು.
200ಕ್ಕೂ ಅಧಿಕ ಮಂದಿ ಆಧಾರ್ ತಿದ್ದುಪಡಿ ಹಾಗೂ ಹೊಸ ನೋಂದಣಿ ಅಭಿಯಾನದ ಪ್ರಯೋಜನ ಪಡಕೊಂಡರು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 150 ಕ್ಕೂ ಅಧಿಕ ಮಂದಿ ಭಾಗಿಯಾದರು.
ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ಸ್ವಾಗತಿಸಿ, ಮಲ್ಪೆ ಶಾಖಾ ವ್ಯವಸ್ಥಾಪಕರಾದ ನವೀನ್ ಕೆ ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ವಂದಿಸಿದರು.