ಅಂಪಾರು ಸಿಎ ಬ್ಯಾಂಕ್ ಅವ್ಯವಹಾರ ಮುಚ್ಚಿ ಹಾಕಿದರೆ ಹೋರಾಟದ ಎಚ್ಚರಿಕೆ
ಕುಂದಾಪುರ, ನ.23: ಅಂಪಾರು ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಸುಮಾರು 3 ಕೋಟಿ 95 ಲಕ್ಷ ರೂ. ಭ್ರಷ್ಟಾಚಾರ ನಡೆದಿದೆ. ಹಣ ದುರುಪಯೋಗ ದಲ್ಲಿ ಶಾಮೀಲಾಗಿರುವ ನಿರ್ದೇಶಕರುಗಳನ್ನು ವಜಾಗೊಳಿಸಿ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. 10 ವರ್ಷಗಳ ಕಾಲ ಅವರು ಚುನಾವಣೆಯಲ್ಲಿ ನಿಲ್ಲಬಾರದು. ಹಗರಣಗಳನ್ನು ಮುಚ್ಚಿಹಾಕಲು ಯತ್ನಿಸಿದರೆ ನಾವು ಸುಮ್ಮನಿರಲ್ಲ. ಅವರ ವಿರುದ್ದ ಖಾಸಗಿ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ನವೀನ್ ಶೆಟ್ಟಿ ಅಂಪಾರು ಎಚ್ಚರಿಕೆ ನೀಡಿದ್ದಾರೆ.
ಅಂಪಾರಿನ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಡೆದ ಹಣಕಾಸು ಅವ್ಯವಹಾರ ಹಾಗೂ ಆಡಳಿತ ಮಂಡಳಿಯ ವೈಫಲ್ಯ ಖಂಡಿಸಿ ಸ್ವಾಭಿಮಾನಿ ಸಹಕಾರಿ ಅಂಪಾರು ನೇತೃತ್ವದಲ್ಲಿ ಶುಕ್ರವಾರ ಸಂಘದ ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.
2015-16ರಲ್ಲಿ ನಡೆದ ಅವ್ಯವಹಾರದ ಬಗ್ಗೆ ಮೂರು ವರ್ಷಗಳಿಂದ ಧ್ವನಿ ಎತ್ತುತ್ತಿದ್ದರೂ ಸಂಬಂಧಪಟ್ಟವ ರಿಂದ ಯಾವುದೇ ಸ್ಪಂದನೆ ಇಲ್ಲ. ಆಡಿಟ್ ರಿಪೋರ್ಟ್‌ನಲ್ಲಿಯೂ ಸಂಸ್ಥೆ ಲಾಭಾಂಶದಲ್ಲಿದೆ ಎಂದು ತೋರಿಸಲಾಗಿದೆ. ಸೊಸೈಟಿಯ ಮೇಲೆ ನಮಗೆ ಯಾವುದೇ ರೀತಿಯ ಬೇಸರವಿಲ್ಲ. ನೊಂದು ಬಂದವರಿಗೆ ಹಣ ಸಿಗುವ ವ್ಯವಸ್ಥೆ ಆಗಬೇಕು ಎನ್ನುವುದು ನಮ್ಮ ಆಸೆ ಎಂದವರು ನುಡಿದರು.
ನಮ್ಮೂರಿನ ಸೊಸೈಟಿ ಲಾಭದಲ್ಲಿದ್ದರೆ ಮಾತ್ರ ನಮಗೆ ಸಾಲ ಸಿಗುತ್ತದೆ. ಎಂಟು ಕೋಟಿ ರೂ. ಸಾಲ ವಸೂಲಾತಿಯಾಗದೆ ಕೋರ್ಟ್‌ನಲ್ಲಿದೆ. ಆಡಳಿತ ಮಂಡಳಿ ಹಗರಣಗಳನ್ನು ಗೊತ್ತು ಗೊತ್ತಿಲ್ಲದ ಹಾಗೆ ಮಾಡಿ ಮುಗಿಸುತ್ತದೆ. ಪ್ರತೀ ವರ್ಷ ಶೇ.25ರಷ್ಟು ಡಿವಿಡೆಂಡ್ ಸಿಗಬೇಕಾದ ಸೊಸೈಟಿ ಇದೀಗ 2 ಕೋಟಿ 82 ಲಕ್ಷ ರೂ. ನಷ್ಟದಲ್ಲಿದೆ ಎಂದವರು ಬೇಸರ ವ್ಯಕ್ತಪಡಿಸಿದರು.
ಇಷ್ಟೆಲ್ಲಾ ಹಗರಣಗಳು ನಡೆದರೂ ತರಾತುರಿಯಲ್ಲಿ ಆಡಳಿತ ಮಂಡಳಿಯ ಚುನಾವಣೆಗೆ ದಿನಾಂಕ ನಿಗದಿಪಡಿಸಲಾಗಿದೆ. ದುರಾಡಳಿತ ಜನರಿಗೆ ಗೊತ್ತಾಗ ಬಾರದೆಂದು ಕೋರ್ಟ್ ಮೊರೆ ಹೋಗಿ ಸ್ಟೇತರಲಾಗಿದೆ. ವಿಶೇಷ ಮಹಾಸಭೆ ಕರೆದು ಆ ಸಭೆಯಲ್ಲಿ ಲೆಕ್ಕಪತ್ರ ಮಂಡನೆ ಮಾಡುತ್ತೇನೆ ಎಂದ ಅಧ್ಯಕ್ಷರು ವಿಶೇಷ ಮಹಾಸಭೆ ನಡೆಸಿಲ್ಲ ಎಂದು ನವೀನ್ ಶೆಟ್ಟಿ ದೂರಿದರು.
ವಕೀಲರಾದ ಉಮೇಶ್ ಶೆಟ್ಟಿ ಶಾನ್ಕಟ್ಟು ಮಾತನಾಡಿ, ಅಂಪಾರು ಸಹಕಾರಿ ವ್ಯವಸಾಯಿಕ ಸಂಘ ಈ ಭಾಗದ ರೈತರಿಗೆ, ಶ್ರಮಿಕರಿಗೆ ಆರ್ಥಿಕವಾಗಿ ಸಹಾಯ ಮಾಡುವ ಸದುದ್ದೇಶದಿಂದ ರೈತರು,ಹೋರಾಟಗಾರರು ಶ್ರಮಪಟ್ಟು ಸಂಘವನ್ನು ಕಟ್ಟಿ ಬೆಳೆಸಿದ್ದು, ಇದೀಗ ಈ ಸಂಸ್ಥೆಯಲ್ಲಿ 58ಕೋಟಿ ರೂ. ವ್ಯವಹಾರನಡೆಯುತ್ತಿದೆ. ಸರಿಸುಮಾರು 3 ವರ್ಷಗಳಿಂದ ಸಂಸ್ಥೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ನಾವು ಮಹಾಸಭೆಯಲ್ಲಿ ಪ್ರಶ್ನೆಗಳನ್ನು ಮಾಡುತ್ತಲೇ ಬಂದಿ ದ್ದೇವೆ. ನಮ್ಮ ಭಾಗದ ಜನರನ್ನು ಬಿಟ್ಟು ಬೇರೆಯವರಿಗೆ ನಿಯಮ ಮೀರಿ ಸಾಲವನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ತಪ್ಪು ಯಾರೇ ಮಾಡಲಿ, ಅಧಿಕಾರವನ್ನು ದುರುಪಯೋಗ ಮಾಡಿ ಹಣವನ್ನು ಕೊಳ್ಳೆ ಹೊಡೆದವರನ್ನು ಸಹಕಾರಿ ಕಾಯ್ದೆಯ ಕಲಂ 64ರ ಅಡಿಯಲ್ಲಿ ತನಿಖೆ ನಡೆಸಬೇಕು. 58 ಕೋಟಿ ರೂ. ವ್ಯವಹಾರ ನಡೆಸುತ್ತಿರುವ ಸಂಸ್ಥೆ ಇದೀಗ ಆಡಳಿತ ವೈಫಲ್ಯದಿಂದ 3 ಕೋಟಿ 95 ಲಕ್ಷ ರೂ. ಹಣ ದುರುಪಯೋಗ ನಡೆದಿದೆ. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆ ಮುಳುಗಿ ಹೋಗಬಾರದು ಎನ್ನುವ ಉದ್ದೇಶದಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ತನಕವೂ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ ಎಂದರು.
ಇದೇ ವೇಳೆ ಪ್ರತಿಭಟನಾನಿರತರು ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ವೈದ್ಯ ಹಾಗೂ ಸಿಇಒ ಪ್ರವೀಣ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಉದಯ್ ಶೆಟ್ಟಿ ಅಂಪಾರು, ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಅಂಪಾರು ಕಿರಣ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಶಂಕರನಾರಾಯಣ ಸಿಪಿಐ ಜಯರಾಮ್ ಗೌಡ, ಪಿಎಸ್‌ಐ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದ್ದರು.