ಲಂಚ ನೀಡಿಕೆ ಆರೋಪ – ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ದೋಷಾರೋಪಣೆ-ಷೇರು ಮೌಲ್ಯ ಶೇ.23 ಕುಸಿತ, 2.8 ಲಕ್ಷ ಕೋಟಿ ರೂ ನಷ್ಟ!

ಮುಂಬೈ: ಲಂಚ ನೀಡಿಕೆ ಆರೋಪದಡಿ ಭಾರತದ ಉಧ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ದೋಷಾರೋಪಣೆಯಾದ ಬೆನ್ನಲ್ಲೇ ಇತ್ತ ಭಾರತೀಯ ಷೇರುಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ.

ಅದಾನಿ ಗ್ರೂಪ್‌ನ ಷೇರುಗಳು ಗುರುವಾರ ಶೇ.23% ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕುಸಿದಿದ್ದು, ಸಂಸ್ಥೆಯ ಮಾರುಕಟ್ಟೆ ಬಂಡವಾಳದ ಪೈಕಿ 2.8 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಬರೊಬ್ಬರಿ 23.44% ರಷ್ಟು ಕುಸಿದು 2,159 ರೂ.ಗೆ ಮೌಲ್ಯ ಇಳಿಕೆಯಾಗಿದೆ.

ಅದಾನಿ ಎಂಟರ್‌ಪ್ರೈಸಸ್‌ ಮಾತ್ರವಲ್ಲದೇ ಅದಾನಿ ಗ್ರೀನ್ ಎನರ್ಜಿ ಷೇರುಗಳ ಮೌಲ್ಯ ಕೂಡ 18% ಕುಸಿದು ರೂ 1,145 ಕ್ಕೆ ತಲುಪಿದರೆ, ಅದಾನಿ ಪೋರ್ಟ್ಸ್ 13.11% ಕಡಿಮೆಯಾಗಿ ರೂ 1,120 ಕ್ಕೆ ಕುಸಿದಿದೆ. ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇ.20ರಷ್ಟು ಕುಸಿದಿದ್ದು, ರೂ 697.70 ರೂ.ಗೆ ಇಳಿಕೆಯಾಗಿದೆ. ಅಂತೆಯೇ ಅದಾನಿ ಟೋಟಲ್ ಗ್ಯಾಸ್ ಷೇರುಗಳ ಮೌಲ್ಯ ಶೇ. 10.35% ಕುಸಿದು ರೂ 602.65, ಮತ್ತು ಅದಾನಿ ಪವರ್ 9.55% ಕುಸಿದು ರೂ 474ಗೆ ಕುಸಿದಿದೆ. ಅದಾನಿ ವಿಲ್ಮರ್ 10%, ಎಸಿಸಿ ಸಿಮೆಂಟ್ 8%, ಅಂಬುಜಾ ಸಿಮೆಂಟ್ 12.5% ​​ಮತ್ತು ಅದಾನಿ ಒಡೆತನದ NDTV ಷೇರು ಮೌಲ್ಯ ಕೂಡ 0.5% ಕುಸಿದವು ಎಂದು ತಿಳಿದುಬಂದಿದೆ

ಸಹವರ್ತಿ ಸಂಸ್ಥೆಗಳಿಗೂ ಭಾರಿ ನಷ್ಟ

ಇನ್ನು ಅದಾನಿ ಸಂಸ್ಥೆಗಳ ಮಾತ್ರವಲ್ಲದೇ ಅದಾನಿ ಗ್ರೂಪ್ ಕಂಪನಿಗಳಿಗೆ ಮಾನ್ಯತೆ ಹೊಂದಿರುವ ಬ್ಯಾಂಕಿಂಗ್ ಸಂಸ್ಥೆಗಳ ಷೇರುಗಳು ಸಹ ತೀವ್ರ ಕುಸಿದಿವೆ. ಈ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಬ್ಯಾಂಕ್ ಆಫ್ ಬರೋಡಾ (ಬಿಒಬಿ), ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗುರುವಾರ ಇಂಟ್ರಾಡೇ ವಹಿವಾಟಿನಲ್ಲಿ ಶೇ. 7% ಕ್ಕಿಂತ ಹೆಚ್ಚು ಕುಸಿದವು.

ಭಾರತದ ಈಕ್ವಿಟಿ ಮಾರುಕಟ್ಟೆ ಮಾನದಂಡವಾದ ಎನ್‌ಎಸ್‌ಇ ನಿಫ್ಟಿ ಗುರುವಾರ 0.71% ರಷ್ಟು ಕಸಿದಿದ್ದು, ಬಿಎಸ್‌ಇ ಸೆನ್ಸೆಕ್ಸ್ ಶೇ.0.51% ರಷ್ಟು ಸೂಚ್ಯಂಕ ಕುಸಿದಿದೆ. ಅಂತೆಯೇ ಅಮೆರಿಕ ಮೂಲದ ಹೂಡಿಕೆ ಸಂಸ್ಥೆ GQG ಪಾಲುದಾರರ ಷೇರುಗಳು ಮಂಗಳವಾರ ಶೇ.20% ರಷ್ಟು ಕುಸಿದಿದ್ದವು. GQG ಅದಾನಿ ಗ್ರೂಪ್ ಕಂಪನಿಗಳಲ್ಲಿ ಪ್ರಮುಖ ಹೂಡಿಕೆದಾರ ಸಂಸ್ಥೆಯಾಗಿದೆ.

ಭ್ರಷ್ಟಾಚಾರ-ವಂಚನೆ ಆರೋಪ

ಸೌರ ವಿದ್ಯುತ್‌ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್‌ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.

ಭಾರತದಲ್ಲಿ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್‌ ಹೂಡಿಕೆ ಆಕರ್ಷಿಸಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಹಾಗೂ ಅಮೆರಿಕ ಒಳಗೊಂಡಂತೆ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪವು ಇವರ ಮೇಲಿದೆ.

Leave a Reply

Your email address will not be published. Required fields are marked *

error: Content is protected !!