ಬನ್ನಂಜೆ ಸಂಜೀವ ಸುವರ್ಣರಿಗೆ ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ
ಉಡುಪಿ: ‘ಗುರು ಸುವರ್ಣ’ ಎಂದೇ ಸುಪ್ರಸಿದ್ಧರಾಗಿರುವ ಉಡುಪಿಯ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ನೀಡಿ ಗೌರವಿಸಿದೆ.
ನ.19ರಂದು ಮಂಗಳೂರು ಉರ್ವಸ್ಟೋರಿನ ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಈ ಪ್ರತಿಷ್ಠಿತ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಡಿ.ವೇದವ್ಯಾಸ ಕಾಮತ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್, ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ ಎನ್. ಮೊದಲಾದವರು ಉಪಸ್ಥಿತರಿದ್ದರು.
ಬನ್ನಂಜೆ ಸುವರ್ಣರ ಬಗ್ಗೆ : ಶ್ರೀ ಬನ್ನಂಜೆ ಸಂಜೀವ ಸುವರ್ಣ ಅವರು 1955ರಲ್ಲಿ ಜನಿಸಿದರು. ಅವರು ಪ್ರಾಥಮಿಕ ಯಕ್ಷ ಶಿಕ್ಷಣವನ್ನು ಭಾಗವತ ಗುಂಡಿಬೈಲು ನಾರಾಯಣ ಶೆಟ್ಟಿ, ಮೆಟ್ಟಲ್ ಕೃಷ್ಣಯ್ಯ ಶೆಟ್ಟಿ ಮತ್ತು ಮಾರ್ಗೋಳಿ ಗೋವಿಂದ ಸೇರೆಗಾರ್ ಅವರಿಂದ ಕಲಿತು, ನಂತರ ಉಡುಪಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಯಕ್ಷಗಾನದ ಪ್ರತಿಯೊಂದು ಅಂಗವನ್ನು ಕೂಲಂಕಷವಾಗಿ ಅಭ್ಯಾಸ ಮಾಡಿ, ಸಾಲಿಗ್ರಾಮ, ಹಿರಿಯಡ್ಕ, ಗೋಳಿಗರಡಿ ಮೇಳದಲ್ಲಿ ಯಕ್ಷಗಾನ ವೇಷಧಾರಿಗಳಾಗಿ ಕಲಾಸೇವೆ ಮಾಡಿದ್ದಾರೆ. 1982ರಲ್ಲಿ ಡಾ.ಶಿವರಾಮ ಕಾರಂತರ ನಿರ್ದೇಶನದ ಯಕ್ಷಗಾನ ಕೇಂದ್ರದ ವ್ಯವಸಾಯಿ ಮೇಳವಾದ ಯಕ್ಷರಂಗಕ್ಕೆ ಸೇರ್ಪಡೆಯಾದರು. 1984ರಿಂದ ಯಕ್ಷಗಾನ ಕೇಂದ್ರದ ಗುರುಗಳಾಗಿ ನೇಮಕಗೊಂಡು ನಂತರ 2006ರಿಂದ 2022ರ ವರೆಗೆ ಯಕ್ಷಗಾನ ಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ತನ್ನದೇ ಆದ ಯಕ್ಷಗಾನ ಗುರುಕುಲವನ್ನು ಕಟ್ಟಿಕೊಂಡು ಆಸಕ್ತರಿಗೆ ಯಕ್ಷ ಶಿಕ್ಷಣವನ್ನು ನೀಡುತ್ತಿದ್ದಾರೆ.
ಇವರು ಪ್ರಯೋಗಶೀಲತೆಯಲ್ಲಿ ಎತ್ತಿದ ಕೈ. 1982ರಲ್ಲಿ ಸಂಸ್ಕೃತದಲ್ಲಿ ಯಕ್ಷಗಾನ ಪ್ರಯೋಗ, ಮರಾಠಿ ರಂಗಭೂಮಿಯಲ್ಲಿ ಯಕ್ಷಗಾನ ರಂಗಕಲೆಯನ್ನು ಸಂಯೋಜಿಸಿ ವಿನೂತನ ಸಾಧ್ಯತೆಯನ್ನು ತೋರಿಸಿರುತ್ತಾರೆ. ಹೊಸ್ತೋಟ ಮಂಜುನಾಥ ಭಾಗವತರ ಚಿತ್ರಪಟ ರಾಮಾಯಣ ಪ್ರಸಂಗವನ್ನು ಮಾಡಿರುತ್ತಾರೆ. ಯಕ್ಷಗಾನ ರೂಪಕವನ್ನು ಹಿಂದಿಯಲ್ಲಿ ದೆಹಲಿಯ ಎನ್.ಎಸ್.ಡಿ. ವಿದ್ಯಾರ್ಥಿಗಳಿಂದ ಮಾಡಿಸಿ ದೆಹಲಿ ಮತ್ತು ಚೀನಾದಲ್ಲಿ ಪ್ರಯೋಗ, ಬುದ್ಧಿಮಾಂದ್ಯ, ಕಿವುಡ, ಮೂಗ ವಿದ್ಯಾರ್ಥಿಗಳಿಗೆ ಯಕ್ಷಗಾನ ರಂಗ ಶಿಕ್ಷಣ ನೀಡಿ ಜಟಾಯು ಮೋಕ್ಷ ಮತ್ತು ನಳ ಕಾರ್ಕೋಟಕ ಎಂಬ ಪೌರಾಣಿಕ ಕಥಾನಕಗಳನ್ನು ರೂಪಕವಾಗಿ ಸಂಯೋಜಿಸಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೆ ಬಿ.ವಿ.ಕಾರಂತರ ಜೊತೆಯಲ್ಲಿ ಷೇಕ್ಸ್ ಪಿಯರ್ ಮ್ಯಾಕ್‌ಬೆತ್ ನಾಟಕಕ್ಕೆ ನೃತ್ಯ ನಿರ್ದೇಶನ ಕೂಡಾ ಮಾಡಿರುವುದು ಇವರ ಹೆಗ್ಗಳಿಕೆ.
2002ರಲ್ಲಿ ನ್ಯೂಯಾರ್ಕ್ನ ಎಲೆನ್ ಸ್ಟುವರ್ಟ್ ಅವರೊಂದಿಗೆ ಜೊತೆಗೂಡಿ ಲಾಮಾಮಾ ಥಿಯೇಟರ್‌ನಲ್ಲಿ ಭಗವದ್ಗೀತೆ ರೂಪಕದ ನಿರ್ದೇಶನ ಮಾಡಿದ್ದಾರೆ. ಸಿಂಗಾಪುರ್‌ನಲ್ಲಿ ನಡೆದ ಡ್ಯಾನ್ಸ್ ಫೆಸ್ಟಿವಲ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. 1998ರಲ್ಲಿ ಆಸ್ಟ್ರೇಲಿಯಾದ ಹವ್ಯಾಸಿ ಕಲಾಭ್ಯಾಸಿಗಳಿಗಾಗಿ ಫುಡ್ ಫೆಸ್ಟಿವಲ್ ಎಂಬ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿದ್ದಾರೆ. ಲಂಡನ್ನಿನ 42 ಶಾಲೆಗಳಲ್ಲಿ ಸುಮಾರು ಎರಡೂವರೆ ತಿಂಗಳುಗಳ ಕಾಲ ವಿದ್ಯಾರ್ಥಿಗಳಿಗೆ ಕಲೆ, ಸಂಗೀತ, ಸಂಸ್ಕೃತಿ, ನೃತ್ಯ ಅಭಿನಯದ ಬಗ್ಗೆ ತರಬೇತಿ ನೀಡಿದ್ದಾರೆ. ಯಕ್ಷಗಾನವಲ್ಲದೇ ಕೂಡಿಯಾಟ್ಟಂ, ಭರತನಾಟ್ಯಂ, ಯೋಗ ಕಲಾಭ್ಯಾಸದಲ್ಲೂ ಬನ್ನಂಜೆಯವರು ಪರಿಣತಿ ಪಡೆದಿದ್ದಾರೆ. ಹಲವು ದಾಖಲೆಗಳನ್ನು ಮಾಡಿರುವ ಶ್ರೀಯುತರು ೩೦ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಕ್ರಮ ನೀಡಿರುತ್ತಾರೆ. ಇವರಿಗೆ 2010ನೇ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ, 2020ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿಯು ಸಹ ಲಭಿಸಿದೆ.
ಇಂತಹ ಅಪ್ರತಿಮ ಪ್ರತಿಭೆಯನ್ನು ಗುರುತಿಸಿ ಇವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯು ೨೦೨೩ನೇ ಸಾಲಿನ ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’ ನೀಡಿ ಗೌರವಿಸುತ್ತಿರುವುದು ಅಕಾಡೆಮಿಯ ಗೌರವವನ್ನು ಹೆಚ್ಚಿಸಿದೆ ಎಂಬುದು ಅಕಾಡೆಮಿಯ ಅಂಬೋಣ.
ನನ್ನ ಯಕ್ಷ ಗುರು ಸುವರ್ಣರೆಂದರೆ … ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟರು ಮಾತನಾಡುತ್ತಾ ತನ್ನ ಯಕ್ಷಗಾನ ರಂಗದ ಪಯಣವನ್ನು ಮೆಲುಕು ಹಾಕಿದರು. ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಒಂದು ಸಂಧರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರೊಬ್ಬರು ನನ್ನನ್ನು ಕುರಿತು ‘ತಲ್ಲೂರು ಅವರು ಕಲಾರಂಗದ ಅಧ್ಯಕ್ಷರು ಹೌದು, ಆದರೆ ಕಲಾವಿದರಲ್ಲ ‘ ಎಂಬ ಕೊಂಕು ಮಾತನ್ನಾಡಿದರು. ಈ ಮಾತು ನನ್ನ ಯಕ್ಷಗಾನ ಪ್ರೇಮದ ದಿಕ್ಕನ್ನೇ ಬದಲಾಯಿಸಿತು ಎಂದೇ ಹೇಳಬೇಕು. ಆಗ ನನಗೆ 60ರ ಹರೆಯ. ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂದು ನಂಬಿದವ ನಾನು. ಈ ಅಪಸ್ವರವನ್ನು ಇಲ್ಲೇ ಅಡಗಿಸಬೇಕು ಎಂಬ ಒಂದೇ ನಿರ್ಧಾರ ಮಾಡಿ ಯಕ್ಷಗಾನವನ್ನು ಕಲಿತೆ ಸಿದ್ಧ ಎಂದು ಪಣ ತೊಟ್ಟೆ. ಆಗ ಬನ್ನಂಜೆ ಸಂಜೀವ ಸುವರ್ಣ ಅವರು ಗುರುಗಳಾಗಿದ್ದ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದ ಕದ ತಟ್ಟಿದೆ. ಸುವರ್ಣರು ನನ್ನ ನಿರ್ಧಾರವನ್ನು ಕೇಳಿ ಒಂದು ಕ್ಷಣ ಮುಗುಳ್ನಕ್ಕರು. ‘ಶೆಟ್ರೆ, ನಿಮ್ಮಿಂದ ಎಲ್ಲವೂ ಸಾಧ್ಯ, ಮಾರುತಿ ಇದ್ದಾನೆ. ಹೆದರದೆ ಕ್ಲಾಸ್‌ಗೆ ಬನ್ನಿ ‘ ಎಂದು ನನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿದರು. ಅವರ ಈ ಪ್ರೋತ್ಸಾಹದ ಮಾತು, ನಾನು ನಂಬಿದ ಮಾರುತಿ, ಅನ್ನಪೂರ್ಣೇಶ್ವರಿಯನ್ನು ಮನಸಾರೆ ಸ್ಮರಿಸಿ, ಯಕ್ಷಗಾನದ ಹೆಜ್ಜೆಗಾರಿಕೆ ಕಲಿತೆ. ಯಕ್ಷಗಾನ ಕಲೆಯ ಬಗ್ಗೆ ಆವರೆಗೂ ಅತೀವ ಆಸಕ್ತಿ ಹೊಂದಿದ್ದ ನಾನು, ಮುಂದೊoದು ದಿನ ಗೆಜ್ಜೆ ಕಟ್ಟಿ ಕುಣಿಯುತ್ತೇನೆ ಎಂದು ಕನಸಲ್ಲೂ ಎನಿಸಿರಲಿಲ್ಲ. ಈ ಮುಂದಾಲೋಚನೆ ನನ್ನಲ್ಲಿದ್ದಿದ್ದರೆ, ಎಂದೋ ಯಕ್ಷಗಾನವನ್ನು ಅಭ್ಯಾಸಿಸಬಹುದಿತ್ತು. ಇರಲಿ, ನಿಯಮಿತವಾಗಿ ಯಕ್ಷಗಾನದ lಪಾಠವನ್ನು ಅಭ್ಯಾಸಿಸಿದೆ. ಮಾರುತಿ ನನ್ನ ಕೈ ಬಿಡಲಿಲ್ಲ. ಮುಂದೊoದು ದಿನ ‘ಶ್ರೀಕೃಷ್ಣ, ಮಯೂರಧ್ವಜ, ಪರಶುರಾಮ, ಹನುಮಂತ, ಮೊದಲಾದ ಪೌರಾಣಿಕ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸೈ ಎನಿಸಿಕೊಂಡೆ. ಪೊಡವಿಗೊಡೆಯ ಶ್ರೀಕೃಷ್ಣನ ವೇಷವನ್ನು ಹಾಕಿದಾಗ ‘ರೋಮಾಂಚನ ‘ವಾಗಿ ಕೃತಾರ್ಥನಾದೆ. ರಾಮದೂತ ಹನುಮಂತನಾಗಿ ರಂಗಸ್ಥಳದಲ್ಲಿ ಕಾಣಿಸಬೇಕು ಎಂಬ ಆಸೆ ನನ್ನ ಮನಸ್ಸನ್ನು ಕೊರೆಯುತ್ತಿತ್ತು. ಇದು ಕೂಡಾ ನನಸಾಗುವ ಕಾಲ ಕೂಡಿ ಬಂತು. ಒಂದು ಶುಭಾವಸರದಲ್ಲಿ, ‘ಶರಸೇತು ಬಂಧನ ‘ ಪ್ರಸಂಗದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿತು. ನನ್ನ ಹೃದಯ ಕಮಲದಲ್ಲಿ ನೆಲೆಸಿರುವ ಆ ಮಾರುತಿ ಈ ರೀತಿಯಲ್ಲಿ ನನ್ನ ಕೀರುತಿ ಹೆಚ್ಚಿಸಿದ. ಅಂದಿನಿoದ ಇಂದಿನವರೆಗೆ ಅನೇಕ ಶುಭಾವಸರಗಳಲ್ಲಿ ‘೪೦೦’ಕ್ಕೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದೇನೆ. `ಅವರು ಯಕ್ಷಗಾನ ಕಲಾವಿದರಲ್ಲ ‘ ಎಂಬ ಕೊಂಕು ತೆಗೆದ ಮಂದಿಗೆ ಈ ಮೂಲಕ ತಕ್ಕ ಉತ್ತರ ಸಿಕ್ಕಿರಬಹುದು ಎಂದು ನನ್ನ ಅನಿಸಿಕೆ. ಇದೆಲ್ಲಾ ನನಸಾಗಲು ಕಾರಣ ಗುರು ಬನ್ನಂಜೆ ಸಂಜೀವ ಸುವರ್ಣರ ಆಶೀರ್ವಾದ ಎಂದೇ ನನ್ನ ನಂಬಿಕೆ ಎಂದರು. ಪ್ರಸ್ತುತ ಗುರು ಸಂಜೀವ ಸುವರ್ಣರಿಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಾನೊಬ್ಬನೇ ಅಲ್ಲ. ಅಕಾಡೆಮಿಯ ಎಲ್ಲಾ ಸದಸ್ಯರು ಅವಿರೋಧವಾಗಿ ಒಪ್ಪಿಕೊಂಡು ಈ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಇದೇ ರೀತಿ ಮುಂದೆಯೂ ಅರ್ಹತೆಗೆ ಪ್ರಶಸ್ತಿ ನೀಡಲು ಅವರೆಲ್ಲಾ ಮುಂದಾಗುತ್ತಾರೆ. ಕಲಾವಿದರ ಸೇವೆಗೆ ಶ್ರಮ ವಹಿಸುತ್ತಾರೆ ಎಂಬುದರಲ್ಲಿ ನನಗೆ ಭರವಸೆಯಿದೆ ಎಂದಾಗ ಸಭೆಯಲ್ಲಿದ್ದ ಯಕ್ಷ ಪ್ರೇಮಿಗಳು ಕರಡಾತನದೊಂದಿಗೆ ಸ್ವಾಗತಿಸಿದರು.
ತಲ್ಲೂರು ಅಧ್ಯಕ್ಷರಾಗಿದ್ದು ಯಕ್ಷಗಾನಕ್ಕೆ ಭೂಷಣ : ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಗುರು ಸಂಜೀವ ಸುವರ್ಣ ಅವರು ಮಾತನಾಡಿ, ಅವರ ಕೈ ಬಲಪಡಿಸುವ ಅಗತ್ಯವಿದೆ. ಎಲ್ಲರೂ ಇನ್ನೊಬ್ಬರ ಕಿಸೆಗೆ ಕೈ ಹಾಕುವವರು ಆದರೆ ಶಿವರಾಮ ಶೆಟ್ಟರು ಹಾಗಲ್ಲ. ತನ್ನ ಕಿಸೆಗೆ ಕೈ ಹಾಕಿ ತೆಗೆದುಕೊಡುವವರು. ಇದುವರೆಗೆ ಯಾರೂ ಗುರುತಿಸಿಲ್ಲವೋ ಅಂತಹವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ. ಭಾಗವತರಾಗಿರಬಹುದು, ಕಲಾವಿದರೇ ಆಗಲಿ ಅವರನ್ನು ಗುರುತಿಸಿ ಗೌರವಿಸಿದ್ದಾರೆ. ಯಕ್ಷಗಾನ ಕೇಂದ್ರದ ಅನಾಥ ೨೦೦-೩೦೦ ಮಕ್ಕಳಿಗೆ ಶಿಕ್ಷಣಕ್ಕಾಗಿ ಲಕ್ಷಾಂತರ ರೂ.ನ್ನು ಖರ್ಚು ಮಾಡಿದ್ದಾರೆ. ಬೇರೆ ಬೇರೆ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಘನ ಕಾರ್ಯಗಳನ್ನು ನಡೆಸಿದ್ದಾರೆ. ಅಂತಹ ವ್ಯಕ್ತಿಗೆ ಕರ್ನಾಟಕ ಸರಕಾರ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಗಿರಿಯನ್ನು ನೀಡಿರುವುದು ಕಲೆಗೆ ಭೂಷಣವಾಗಿದೆ ಎಂದರು.