ಪಡುಬಿದ್ರೆ: ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಮುಹೂರ್ತ

ಪಡುಬಿದ್ರಿ: ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ ಗುರುವಾರ ಬೆಳಗ್ಗೆ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಳಿಕ ಮಾತಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು, “ತುಳು ಭಾಷೆ, ಸಂಸ್ಕೃತಿ, ಆಹಾರ ಪದ್ಧತಿಯನ್ನು ವಿಶ್ವದಗಲ ಮೆಚ್ಚಿಕೊಂಡ ಅಸಂಖ್ಯ ಜನರಿದ್ದಾರೆ. ತುಳು ಭಾಷೆಯ ಬೆಳವಣಿಗೆಗೆ ತುಳು ನಾಟಕ, ಸಿನಿಮಾ ಮತ್ತು ತುಳು ಕಲಾವಿದರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಪಡುಬಿದ್ರಿಯ ಮಹಾಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದರೆ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಈ ಸಿನಿಮಾ ಯಶಸ್ಸು ಕಾಣಲಿ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತೀವ ಸಂತಸವಾಗುತ್ತಿದೆ“ ಎಂದು ಶುಭ ಹಾರೈಸಿದರು.

ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ”ತುಳು ಚಿತ್ರರಂಗಕ್ಕೆ ಈಗ ಪರ್ವಕಾಲ. ಮಂಗಳೂರಿನಲ್ಲಿ 9 ಸಿನಿಮಾಗಳಿಗೆ ಚಿತ್ರೀಕರಣ ನಡೆಯುತ್ತಿವೆ. ಒಳ್ಳೊಳ್ಳೆ ಸಿನಿಮಾಗಳನ್ನು ಜನರು ಖಂಡಿತ ಸ್ವೀಕರಿಸುತ್ತಾರೆ. ಸಿನಿಮಾ ತಂಡದ ಪ್ರಯತ್ನಕ್ಕೆ ತುಳುವರು ಬೆಂಬಲ ನೀಡಬೇಕು, ಚಿತ್ರತಂಡಕ್ಕೆ ಶುಭವಾಗಲಿ“ ಎಂದರು. ಕುಸೆಲ್ದರಸೆ ನವೀನ್ ಡಿ. ಪಡೀಲ್ ಮಾತನಾಡಿ, ”ಸಿನಿಮಾ ಯಶಸ್ಸು ಕಾಣಲಿ. ತುಳುನಾಡಿನಲ್ಲಿ ಸಿನಿಮಾ ಒಳ್ಳೆಯ ಹೆಸರು ಮಾಡಲಿ“ ಎಂದರು.

ನಾಯಕ ನಟ ಶೋಧನ್ ಶೆಟ್ಟಿ ಮಾತನಾಡಿ, ”2019 ರಲ್ಲಿಯೇ ಸಿನಿಮಾ ಮಾಡಲು ತಯಾರಿ ಮಾಡಿದ್ದೆ. ಆದರೆ ಕಾರಣಾಂತರದಿಂದ ವಿಳಂಬವಾಯಿತು. ಈಗ ಕಾಲ ಕೂಡಿಬಂದಿದೆ. ನಿಮ್ಮೆಲ್ಲರ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬರಲಿದೆ. ಭಾಗ 1ರ ಚಿತ್ರೀಕರಣ ಮುಗಿದ ಬಳಿಕ ಟೈಟಲ್ ಲಾಂಚ್ ಮಾಡಲಿದ್ದೇವೆ“ ಎಂದರು. ದೇವಸ್ಥಾನದ ಮೊಕ್ತೇಸರ ಭವಾನಿ ಶಂಕರ್ ಹೆಗ್ಡೆ, ಉಮೇಶ್ ಶೆಟ್ಟಿ, ನಟ ಶೋಧನ್ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಡಾ ಪ್ರತೀಕ್ಷಾ, ಡಾ ನಿಖಿಲ್ ಶೆಟ್ಟಿ, ಸಂಜಯ್ ಶೆಟ್ಟಿ ಗೋಣಿಬೀಡು, ಡಾ ವೈಎನ್ ಶೆಟ್ಟಿ, ಮಿಥುನ್, ನವೀನ್ ಚಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ ಕುಳಾಯಿ, ವಿಠಲ್ ಶೆಟ್ಟಿ, ಶಾಂತಾರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉದ್ಯಮಿ ಪಲ್ಲವಿ ಸಂತೋಷ್ ಶೆಟ್ಟಿ ಕೆಮರಾ ಚಾಲನೆ ಮಾಡಿದರು. ಶಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.

ಸಿನಿಮಾ ಕುರಿತು: ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಧನರಾಜ್ ಶೆಟ್ಟಿ, ಉಮೇಶ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶರತ್ ಪೂಜಾರಿ ಬಗ್ಗತೋಟ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ಸಂದೀಪ್ ಉಡುಪಿ ಕೆಮರಾ ಕಣ್ಣಲ್ಲಿ ಸಿನಿಮಾ ಮೂಡಿಬರಲಿದೆ. ರವಿರಾಜ್ ಗಾಣಿಗ ಎಡಿಟರ್, ಪ್ರಸಾದ್ ಕೆ.ಶೆಟ್ಟಿ ಸಂಗೀತ ಸಂಯೋಜನೆ ಸಿನಿಮಾಕ್ಕಿರಲಿದೆ. ಕಲಾವಿದರಾಗಿ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ರಮೇಶ್ ಶೆಟ್ಟಿ, ಸೂರಜ್ ಸನಿಲ್, ನಿತೇಶ್ ಶೆಟ್ಟಿ, ಕೀರ್ತನಾ ಸಾಲಿಯಾನ್, ಶೋಭಾ ಪ್ರಿಯಾ ನಾಯರ್, ಸಂದೀಪ್ ಪೂಜಾರಿ ಬಣ್ಣ ಹಚ್ಚಲಿದ್ದಾರೆ.
ಕಟೀಲು, ಪಡುಬಿದ್ರಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!