ಪಿಲಿಕುಳದಲ್ಲಿ ಕಂಬಳ ಆಯೋಜನೆ: ದ.ಕ. ಜಿಲ್ಲಾಧಿಕಾರಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಕಂಬಳ ಸ್ಪರ್ಧೆ ಆಯೋಜನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಪ್ರಾಣಿ ಸಂಗ್ರಹಾಲಯದ ಬಳಿ ಸ್ಪರ್ಧೆ ನಡೆಸುವುದರಿಂ ದ ಅಲ್ಲಿನ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಬೇರೆ ಸ್ಥಳದಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲು ಆಕ್ಷೇಪವಿಲ್ಲ ಎಂದು ಪೆಟಾ ಅರ್ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೊಳಿಸಿದೆ.

ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ಎಜಿ ಕೆ. ಶಶಿಕಿರಣ್ ಶೆಟ್ಟಿ, ಕರಾವಳಿ ಭಾಗದಲ್ಲಿ ಕಂಬಳ ಆಯೋಜನೆ ಮಾಡುವ ಬಗ್ಗೆ ಅರ್ಜಿದಾರರಿಗೆ ತಕರಾರಿಲ್ಲ. ಪ್ರಾಣಿ ಸಂಗ್ರಹಾಲಯದ ಬಳಿ ಕಂಬಳ ಸ್ಪರ್ಧೆ ನಡೆಸಿದರೆ ಇದರಿಂದ ಪ್ರಾಣಿಗಳು ತೊಂದರೆ ಅನುಭವಿಸಲಿದೆ ಎನ್ನವುದು ಅರ್ಜಿದಾರರ ವಾದವಾಗಿದೆ. ಈ ಬಗ್ಗೆ ಪ್ರಾಣಿಗಳಿಗೆ ನಿಜವಾಗಿಯೂ ತೊಂದರೆಯಾಗುವ ಬಗ್ಗೆ ತಾಂತ್ರಿಕ ಅಧ್ಯಯನ ನಡೆಸಲು ನಾಲ್ವರು ತಜ್ಞರ ಸಮಿತಿ ರಚಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಹೊಸದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರರವನ್ನು ಪ್ರತಿವಾದಿಗಳನ್ನಾಗಿ ಸೇರ್ಪಡೆ ಮಾಡಿದೆ. ಹಾಗಾಗಿ ಅವರಿಗೂ ನೋಟಿಸ್ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ವಿಚಾರಣೆಯನ್ನು ಡಿ.4 ಕ್ಕೆ ಮುಂದೂಡಿದೆ.

Leave a Reply

Your email address will not be published. Required fields are marked *

error: Content is protected !!