ನ.29-ಡಿ.1: ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ
ಉಡುಪಿ: ಉಡುಪಿಯ ಮಹಾತ್ಮಗಾಂಧಿ ಸ್ಮಾರಕ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ ನ.29 ರಿಂದ ಡಿ.1ರವರೆಗೆ ಕಾಲೇಜಿನ ಮುದ್ದಣಮಂಟಪದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯಲ್ಲಿ ಮೊತ್ತಮೊದಲ ಕಾಲೇಜಾಗಿ 1949ರಲ್ಲಿ ಡಾ.ಟಿಎಂಎ ಪೈ ಅವರಿಂದ ಪ್ರಾರಂಭಗೊಂಡ ಕಾಲೇಜು ಇಂದು 75 ಸಂವತ್ಸರಗಳನ್ನು ಪೂರ್ಣ ಗೊಳಿಸಿ ಮುನ್ನಡೆಯುತ್ತಿದೆ. ಉಡುಪಿಯ ಗಾಂಧಿ ಮೈನ್ಸ್ ಶಾಲೆಯಲ್ಲಿ ಪ್ರಾರಂಭ ಗೊಂಡ ತರಗತಿ, ಒಂದೇ ವರ್ಷದಲ್ಲಿ ಈಗಿನ ಸುಂದರ ಕ್ಯಾಂಪಸ್‌ಗೆ ಸ್ಥಳಾಂತರಗೊಂಡಿತ್ತು. ಅಂದಿನಿಂದ ಇಂದಿನವರೆಗೂ ಗುಣಮಟ್ಟದ ಶಿಕ್ಷಣ ಹಾಗೂ ಸಾಂಸ್ಕೃತಿಕ ಪರಂಪರೆಗೆ ಹೆಸರಾಗಿ ಉಳಿದಿದೆ ಎಂದರು.
ಅಮೃತ ಮಹೋತ್ಸವ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿವೆ. ನ.29ರಂದು ಬೆಳಗ್ಗೆ 9 ಗಂಟೆಗೆ ನೂತನವಾಗಿ ನಿರ್ಮಾಣಗೊಂಡ ಟಿ. ಮೋಹನದಾಸ ಪೈ ಸ್ಮಾರಕ ‘ಅಮೃತಸೌಧ’ದ ಉದ್ಘಾಟನೆಯನ್ನು ಎಂಜಿಎಂ ಕಾಲೇಜು ಟ್ರಸ್ಟ್‌ನ ಅಧ್ಯಕ್ಷ ಟಿ.ಸತೀಶ್ ಯು. ಪೈ ಉದ್ಘಾಟಿಸುವರು. ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ಉಪಸ್ಥಿತರಿರುವರು.
ಇದೇ ಸಂದರ್ಭ ಆಯೋಜಿಸಲಾಗುವ ವಸ್ತುಪ್ರದರ್ಶನ ವನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುವ ಕೃಷ್ಣಾಪುರ ಮಠದ ಸ್ವಾಮೀಜಿ, ಅಂಚೆ ಲಕೋಟೆ ಬಿಡುಗಡೆಗೊಳಿಸುವರು. ಶಾಸಕ ಯಶ್ಪಾಲ್ ಸುವರ್ಣ, ಮಣಿಪಾಲ ಬಳಗದ ರಂಜನ್ ಆರ್.ಪೈ, ವಾಸಂತಿ ಆರ್.ಪೈ, ಅಶೋಕ್ ಪೈ, ಡಾ. ಎಚ್.ಎಸ್. ಬಲ್ಲಾಳ್, ಡಾ.ನಾರಾಯಣ ಸಭಾಹಿತ್ ಅವರೊಂದಿಗೆ ಬೆಂಗಳೂರು ಉತ್ತರ ವಿವಿಯ ಉಪಕುಲಪತಿ ಡಾ.ನಿರಂಜನ ವಾನಳ್ಳಿ ಮುಖ್ಯ ಅತಿಥಿಯಾಗಿರುವರು.
ನ.30ರಂದು ಬೆಳಗ್ಗೆ 8:15ಕ್ಕೆ ಶ್ರೀಕೃಷ್ಣ ಮಠದಿಂದ ಕಾಲೇಜಿನವರೆಗೆ ಶೋಭಾ ಯಾತ್ರೆ ನಡೆಯಲಿದೆ. ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಜ್ಯೋತಿ ಹಸ್ತಾಂತರಿಸಲಿದ್ದು, ಡಾ. ರಂಜನ್ ಪೈ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. 11:30 ರಿಂದ ಎಂಜಿಎಂ ನೆನಪು ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಲಿದೆ.
ಡಿ.1ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅಪರಾಹ್ನ 3:30ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ರಾಮೇ ಗೌಡ ಮುಂತಾದವರು ಭಾಗವಹಿಸಲಿದ್ದಾರೆ. ಪ್ರತಿದಿನ ಸಂಜೆ ಹಾಗೂ ಡಿ.1ರಂದು ಬೆಳಗ್ಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ಪ್ರೊ.ಕಾರಂತ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಕಾರ್ಯದರ್ಶಿ ಬಿ.ಪಿ.ವರದರಾಜ ಪೈ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲೆ ಮಾಲತಿ ದೇವಿ ಎ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ನಾಯ್ಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಡಾ.ವಿಶ್ವನಾಥ ಪೈ, ಡಾ.ಅರುಣ್‌ಕುಮಾರ್ ಉಪಸ್ಥಿತರಿದ್ದರು.