ದೇಶದ ಅಭಿವೃದ್ಧಿ ಸಹಕಾರಿ ಕ್ಷೇತ್ರದಿಂದ ಮಾತ್ರ- ಡಾ.ಎಂ.ಎನ್. ರಾಜೇಂದ್ರ ಕುಮಾರ್

ಉಡುಪಿ: ಶಾಲಾ ಪಠ್ಯ ಪುಸ್ತಕದಲ್ಲಿ ಸಹಕಾರಿ ಕ್ಷೇತ್ರದ ವಿಷಯವನ್ನು ಸೇರಿಸುವ ಬಗ್ಗೆ ಸಹಕಾರಿ ಸಚಿವರ ಜೊತೆ ಸಮಾಲೋಚನೆ ನಡೆಸಿ ತೀರ್ಮಾನಿಸಲಾಗಿದೆ. ಅದನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಸರಕಾರ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ದ.ಕ ಜಿಲ್ಲಾ‌ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಬಡಗಬೆಟ್ಟು ಕ್ರೆಡಿಟ್ ಕೋ ಆ. ಸೊಸೈಟಿ ಹಾಗೂ ಉಡುಪಿ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ಅಜ್ಜರಕಾಡಿನ ಮಹತ್ಮಾಗಾಂಧಿ ಜಿಲ್ಲಾ‌ ಕ್ರೀಡಾಂಗಣ ದಲ್ಲಿ ಆಯೋಜಿಸಲಾದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಹಾಗೂ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ದೇಶದ 37 ಕೋಟಿಯಷ್ಟು ಜನರು ಸಹಕಾರಿ ಕ್ಷೇತ್ರದ ಸದಸ್ಯರಾಗಿದ್ದಾರೆ. ಹೀಗಾಗಿ ದೇಶದ ಅಭಿವೃದ್ಧಿ ಆಗಬೇಕಾದರೆ ಅದು ಸಹಕಾರಿ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದರು.

ಬೆಳೆ ಸಾಲ, ಕೃಷಿ ಸಾಲ ನೀಡುವುದರಿಂದ ಸಹಕಾರಿ ಕ್ಷೇತ್ರಕ್ಕೆ ಶೇ.2.5 ನಷ್ಟ ಉಂಟಾಗುತ್ತದೆ. ಸರಕಾರ ಕೂಡ ಸರಿಯಾದ ಸಮಯಕ್ಕೆ ಸಾಲದ ಹಣವನ್ನು ಪಾವತಿಸುವುದಿಲ್ಲ. ಈ ಎಲ್ಲ ಸವಾಲುಗಳನ್ನು ಎದುರಿಸಿಕೊಂಡು ರೈತರ ಏಳಿಗೆಗಾಗಿ, ಕೃಷಿ ಉತ್ಪನ್ನ ಜಾಸ್ತಿಯಾಗಬೇಕೆಂಬ ದೃಷ್ಟಿಕೋನದಿಂದ ಸಹಕಾರಿ ಬ್ಯಾಂಕ್ ಗಳು ಈ ಬೆಳೆ ಮತ್ತು ಕೃಷಿ ಸಾಲ ನೀಡುತ್ತಿವೆ. ನಷ್ಟವನ್ನು ಬೇರೆ ಸಾಲಗಳನ್ನು ನೀಡುವ ಮೂಲಕ‌ ಸರಿದೂಗಿಸುತ್ತಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮಾತನಾಡಿ, ದೇಶದಲ್ಲಿ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಸಹಕಾರಿ ರಂಗದಲ್ಲಿ ಕೊಡು ಕೊಳ್ಳುವಿಕೆಯ ಮನೋಭಾವನೆ ಇದೆ. ಎಲ್ಲರನ್ನೂ ಒಗ್ಗೂಡಿಸುವ ಪರಿಕಲ್ಪನೆ ಇದೆ. ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ಅದಕ್ಕಾಗಿ ಯುವಜನತೆಗೆ ಸಹಕಾರಿ ಕ್ಷೇತ್ರದ ಮಹತ್ವವನ್ನು ತಿಳಿಸಿಕೊಡಬೇಕು ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು.

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ. ಶಂಕರ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಡಿಸಿಸಿ ಬ್ಯಾಂಕ್​ ನಿರ್ದೇಶಕ ದೇವಿಪ್ರಸಾದ್​ ಶೆಟ್ಟಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್​ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕಿ ಕೆ.ಆರ್. ಲಾವಣ್ಯ, ಸಹಾಯಕ ನಿಬಂಧಕಿ ಸುಕನ್ಯಾ, ಯೂನಿಯನ್ ನಿರ್ದೇಶಕರಾದ ಹರೀಶ್ ಕಿಣಿ ಅಲೆವೂರು, ಕಟಪಾಡಿ ಶಂಕರ ಪೂಜಾರಿ, ಶ್ರೀಧರ್ ಪಿ.ಎಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!