ಯಕ್ಷಗಾನ ಕಲಾವಿದ, ಭಾಗವತ ಮುಂಡ್ಕಿನ ಜೆಡ್ಡು ಕಮಲಾಕ್ಷ ಪ್ರಭು ನಿಧನ

ಉಡುಪಿ: ಯಕ್ಷಗಾನ ಕಲಾವಿದ, ಭಾಗವತ ಮುಂಡ್ಕಿನ ಜೆಡ್ಡು ಕಮಲಾಕ್ಷ ಪ್ರಭು (58) ರವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದರು.

ಅವರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನೇತ್ರ ಶಸ್ತ್ರಚಿಕಿತ್ಸಾ ಕೊಠಡಿಯ ತಂತ್ರಜ್ಞನಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು

ಯಕ್ಷಗಾನ ಕಲಾ ಕ್ಷೇತ್ರಕ್ಕೆ ಅಪೂರ್ವ ಸೇವೆ ಸಲ್ಲಿಸಿರುವ ಅವರು ಸಹಸ್ರಾರು ಮಂದಿ ಯಕ್ಷಗಾನ ಕಲಾವಿದರಾಗಲು ಕಾರಣರಾದವರು. ಸಂಪ್ರದಾಯ ಬದ್ಧವಾದ ಬಡಗುತಿಟ್ಟಿನ ಯಕ್ಷಗಾನ ಕಲೆಯ ಉಳಿವಿಗೆ ಅವಿರತ ಶ್ರಮಪಟ್ಟಿದ್ದರು. ತೊಂಭತ್ತರ ದಶಕದಲ್ಲಿ ಮಣಿಪಾಲದ ಸರಳಬೆಟ್ಟುವಿನಲ್ಲಿ ಬಾಲಮಿತ್ರ ಯಕ್ಷ-ಶಿಕ್ಷಣ ಪ್ರತಿಷ್ಠಾನವನ್ನು ಸ್ಢಾಪಿಸಿ ಎಳೆಯ ಪ್ರತಿಭೆಗಳಿಗೆ ನಿರಂತರ ಉಚಿತ ಯಕ್ಷಗಾನ ತರಬೇತಿಯನ್ನು ನೀಡುತ್ತಾ ಬಂದಿರುವರು.

ಬಾಲಮಿತ್ರ ಯಕ್ಷಗಾನ ಮಂಡಳಿಯು ದೇಶದೆಲ್ಲೆಡೆ ಕಾಯ೯ಕ್ರಮಗಳನ್ನು ನೀಡುತ್ತಾ ಬಂದಿರುವುದಲ್ಲದೆ ದುಬೈ, ಸಿಂಗಾಪುರ, ಆಫ್ರಿಕಾ ಸೇರಿ ವಿಶ್ವದ ವಿವಿಧೆಡೆ ಪ್ರದರ್ಶನ ನೀಡಿ ಯಕ್ಷಗಾನ ಕಲೆಯ ಕಂಪನ್ನು ಹರಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದರು. ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿದ್ದ ಮನೆ ಮನೆಗೆ ತೆರಳಿ ಯಕ್ಷಗಾನ ಪ್ರದರ್ಶನ ನೀಡುವ ಹೂವಿನ ಕೋಲು ಪ್ರಾಕಾರವನ್ನು ಹಳ್ಳಿಯಿಂದ ನಗರ ಪ್ರದೇಶಕ್ಕೂ ತಲಪಿಸುವ ಕೆಲಸವನ್ನು ತನ್ನ ಪ್ರತಿಷ್ಠಾನದ ಮೂಲಕ ಮಾಡಿದ ಹೆಗ್ಗಳಿಕೆ ಅವರದು.

ಯಕ್ಷಗಾನ ಕಲೆಯನ್ನೇ ಉಸಿರಾಗಿಸಿದ್ದ ಅವರು ತನ್ನ ಕೊನೆಯುಸಿರನವರೆಗೂ ವಿವಿಧ ಪಾತ್ರಗಳನ್ನು ಮಾಡುತ್ತಾ, ಭಾಗವತಿಕೆಯಲ್ಲಿ ತೊಡಗುತ್ತಾ ಯಕ್ಷಗಾನ ಕಲಾದೇವಿಯ ಸೇವೆಯಲ್ಲಿ ತೊಡಗಿದ್ದರು.

ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ಬಳಿಕ ಅಲ್ಲಿ ಶ್ರೀರಾಮ ದರ್ಶನ ಎಂಬ ಯಕ್ಷಗಾನ ಪ್ರದರ್ಶನವನ್ನು ನೀಡಿದ್ದರು, ಆ ಮೂಲಕ ತನ್ನ ಯಕ್ಷಗಾನ ಕಲಾ ಜೀವನವು ಸಾರ್ಥಕತೆಯನ್ನು ಹೊಂದಿತು ಎಂಬ ಸಂತಸವನ್ನು ವ್ಯಕ್ತಪಡಿಸಿದ್ದರು.

ಅವರು ಪತ್ನಿ ಕಸ್ತೂರ್ಬಾ ಆಸ್ಪತ್ರೆಯ ಸಹಾಯಕ ಶುಶ್ರೂಷಾಧೀಕ್ಷಕಿ ಕವಿತಾ ಕಾಮತ್, ಪುತ್ರರಾದ ವಿಘ್ನೇಶ್ ಮತ್ತು ಶೈಲೇಶ್ ಹಾಗೂ ಅಪಾರ ಬಂಧುಗಳನ್ಮು ಅಗಲಿರುವರು. ಅವರ ನಿಧನಕ್ಕೆ ಬಂಧುಗಳು, ಶಿಷ್ಯವೃಂದ, ಹಿರಿಯ- ಕಿರಿಯ ಯಕ್ಷಗಾನ ಕಲಾವಿದರು ಮತ್ತಿತರರು ಸಂತಾಪವನ್ನು ಸೂಚಿಸಿರುವರು

Leave a Reply

Your email address will not be published. Required fields are marked *

error: Content is protected !!