ನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆ ಇಂದಿನ ಅಗತ್ಯ- ನ್ಯಾ| ಅರವಿಂದ್ ಕುಮಾರ್

ಉಡುಪಿ: ನ್ಯಾಯಾಲಯಗಳಲ್ಲಿ ವ್ಯಾಜ್ಯಗಳ ವಿಲೇವಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆಯ ತೀರ್ಮಾನ ಮತ್ತು ಲೋಕ ಅದಾಲತ್ ಮೂಲಕ ಸಣ್ಣ ಪುಟ್ಟ ಪ್ರಕರಣಗಳನ್ನು ಸಾಧ್ಯವಾದಷ್ಟು ಇತ್ಯರ್ಥಪಡಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಧೀಶ ನ್ಯಾ| ಅರವಿಂದ್ ಕುಮಾರ್ ತಿಳಿಸಿದರು.  

ಅವರು ಇಂದು, ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. 

ನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆ ಇಂದಿನ ಅಗತ್ಯವಾಗಿದೆ. ನ್ಯಾಯಾಂಗದ ಪ್ರಕ್ರಿಯೆಗಳು ವರ್ಚುವಲ್ ಮೂಲಕ ನಡೆಸುವುದರಿಂದ ಕಕ್ಷಿದಾರರಿಗೆ ಪಾರದರ್ಶಕತೆ ತೋರ್ಪಡಿಸುವುದರ ಜೊತೆಗೆ ನ್ಯಾಯಾಧೀಕರಣದ ಬಗ್ಗೆ ಹೆಚ್ಚು ವಿಶ್ವಾಸ ಮೂಡಿಸಲು ಪೂರಕವಾಗುತ್ತದೆ. ಮಾತ್ರವಲ್ಲದೇ ಕಕ್ಷಿದಾರರಿಗೆ ಸಮಯ ಮತ್ತು ಹಣದ ಉಳಿತಾಯವೂ ಸಾಧ್ಯ ಎಂದರು.

ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ,  ನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆ ಇಂದಿನ ಅಗತ್ಯವಾಗಿದೆ. ನ್ಯಾಯಾಂಗದ ಪ್ರಕ್ರಿಯೆಗಳು ವರ್ಚುವಲ್ ಮೂಲಕ ನಡೆಸುವುದರಿಂದ ಕಕ್ಷಿದಾರರಿಗೆ ಪಾರದರ್ಶಕತೆ ತೋರ್ಪಡಿಸುವುದರ ಜೊತೆಗೆ ನ್ಯಾಯಾಧೀಕರಣದ ಬಗ್ಗೆ ಹೆಚ್ಚು ವಿಶ್ವಾಸ ಮೂಡಿಸಲು ಪೂರಕವಾಗುತ್ತದೆ. ಮಾತ್ರವಲ್ಲದೇ ಕಕ್ಷಿದಾರರಿಗೆ ಸಮಯ ಮತ್ತು ಹಣದ ಉಳಿತಾಯವೂ ಇದರಿಂದ ಆಗುತ್ತದೆ ಎಂದರು.

ನ್ಯಾಯಾಲಯಗಳು ಮತ್ತು ವಕೀಲರು ಒಂದೇ ಗಾಡಿಯ ಚಕ್ರಗಳಿದ್ದಂತೆ. ಕಕ್ಷಿದಾರರಿಗೆ ನ್ಯಾಯ ನೀಡುವಲ್ಲಿ ಇಬ್ಬರ ಪಾತ್ರ ಮುಖ್ಯವಾಗಿದೆ. ಕಾರ್ಯಾಂಗ ಮತ್ತು ಶಾಸಕಾಂಗಗಳಿಗಿಂತ ಜನತೆ ನ್ಯಾಯಾಂಗದಲ್ಲಿ ಹೆಚ್ಚಿನ ವಿಶ್ವಾಸ ಇರಿಸಿಕೊಂಡಿದ್ದಾರೆ. ಸಮರ್ಪಕ ನ್ಯಾಯದಾನ ನ್ಯಾಯಾಂಗದ ಆಶಯ ಎಂದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ| ಎನ್.ವಿ ಅಂಜಾರಿಯಾ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನ್ಯಾಯಾಂಗ ಮತ್ತು ಸಾರ್ವಜನಿಕರ ನಡುವೆ ಅವಿನಾಭಾವ ಸಂಬಂಧ ಇದೆ. ವಕೀಲರು ಮತ್ತು ನ್ಯಾಯಾಧೀಶರು ನ್ಯಾಯದಾನದಲ್ಲಿ ನೈತಿಕತೆ, ನ್ಯಾಯಪರತೆ ಹೊಂದಿರ ಬೇಕು. ಹೊಸ ಹೊಸ ನ್ಯಾಯಾಲಯಗಳ ಸ್ಥಾಪನೆಯೊಂದಿಗೆ ಪೂರಕ ಮೂಲಭೂತ ಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು ಎಂದರು.

ವೇದಿಕೆಯಲ್ಲಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಎಸ್.ಶೆಟ್ಟಿ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್ ಭರತ್ ಕುಮಾರ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣನವರ್, ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಮಾಹೆ ವಿವಿಯ ಸಹಕುಲಪತಿ ಡಾ.ಹೆಚ್. ಎಸ್.ಬಲ್ಲಾಳ್ ಉಪಸ್ಥಿತರಿದ್ದರು.

ಶತಮಾನೋತ್ತರ ರಜತ ಮಹೋತ್ಸವ ಸಂಭ್ರಮದ ಸಮ್ಮೇಳನಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಪ್ರಾಸ್ತವಿಕ ಮಾತನಾಡಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ನ್ಯಾಯವಾದಿ ಮೇರಿ ಶ್ರೇಷ್ಟಾ ನಿರೂಪಿಸಿದರು.

ಜಿಲ್ಲಾ, ರಾಜ್ಯ ಮತ್ತು ಸುಪ್ರೀಂಕೋರ್ಟ್‍ಗಳಲ್ಲಿ ಪ್ರತಿದಿನ ಸಾವಿರಾರು ವ್ಯಾಜ್ಯ ಪ್ರಕರಣಗಳ ಮಂಡನೆಯಾಗುತ್ತಿದ್ದು, ನ್ಯಾಯಾಧೀಶರು ಎಷ್ಟೇ ಪಂಡಿತವಾಗಿದ್ದರೂ 2-3 ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ವ್ಯಾಜ್ಯಗಳ ಮುಂದೂಡುವುದು ಅನಿವಾರ್ಯವಾಗಿದೆ. ನ್ಯಾಯದಾನ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿ, ಕ್ಷಿಪ್ರ ನ್ಯಾಯದಾನ ಪ್ರಕ್ರಿಯೆ ಬಗ್ಗೆ ಕಾನೂನು ಸಚಿವರ ಸಹಿತ ನ್ಯಾಯಾಧೀಶರು ಮತ್ತು ವಕೀಲರು ಪರಿಹಾರೋಪಾಯ ಮಾರ್ಗ ಕಂಡುಕೊಳ್ಳಲೇಬೇಕು:-ನ್ಯಾ| ಎಸ್. ಅಬ್ದುಲ್ ನಝೀರ್ ರಾಜ್ಯಪಾಲರು, ಆಂಧ್ರಪ್ರದೇಶ

ತುಳು- ಕನ್ನಡದಲ್ಲಿ ಭಾಷಣ: ರಾಜ್ಯಪಾಲ ನ್ಯಾ. ಅಬ್ದುಲ್ ನಝೀರ್ ಅವರು ಕನ್ನಡ ಮತ್ತು ತುಳು ಭಾಷೆಯಲ್ಲಿ ಮಾತನಾಡಿ ಸಭಿಕರನ್ನು ಮುದಗೊಳಿಸಿದರು. ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಬಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅಳಿಯ ಕಟ್ಟು ಸಂಪ್ರದಾಯ ಅಳಿದುಹೋಗುತ್ತದೆ ಎಂದರು.

ಹೈಕೋರ್ಟ್ ನ್ಯಾಯಾಧೀಶ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾ| ಇ.ಎಸ್. ಇಂದಿರೇಶ್, 125 ರ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. 

ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ| ಎಂ.ಜಿ. ಉಮಾ, ನ್ಯಾ| ರಾಮಚಂದ್ರ ಡಿ. ಹುದ್ದಾರ್, ನ್ಯಾ| ಟಿ. ವೆಂಕಟೇಶ್ ನಾಯ್ಕ್ ರವರನ್ನು ಹಾಗು ಅಭ್ಯಾಗತರನ್ನು ವಕೀಲರ ಸಂಘ ಹಾಗು ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರುಗಳ ವತಿಯಿಂದ ಸನ್ಮಾನಿಸಲಾಯಿತು.

 

ಇದೇ ವೇಳೆ ಉಡುಪಿ ವಕೀಲರ ಸಂಘದ ಸದಸ್ಯರಾಗಿ, ನ್ಯಾಯಾಧೀಶರಾಗಿ ಮತ್ತು ಸರಕಾರಿ ಅಭಿಯೋಜಕರಾ ಗಿ ಆಯ್ಕೆಯಾಗಿ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಉಡುಪಿ ವಕೀಲರ ಸಂಘದ ಮಾಜಿ ಸದಸ್ಯರಿಗೆ ಮತ್ತು ವಕೀಲರ ಸಂಘದ ಮಾಜಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.

ಮಣಿಪಾಲದ ಕಸ್ತುರ್ಬಾ ಆಸ್ಪತ್ರೆಯಿಂದ ಉಡುಪಿ ವಕೀಲರ ಸಂಘದ ಸದಸ್ಯರಿಗೆ ನೀಡಲಾಗುವ ವಿಶಿಷ್ಟ ಆರೋಗ್ಯ ಕಾರ್ಡನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನ್ಯಾ|ಎಸ್. ವಿ.ಅಂಜಾರಿಯಾ ಬಿಡುಗಡೆ ಮಾಡಿದರು‌.

Leave a Reply

Your email address will not be published. Required fields are marked *

error: Content is protected !!