ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ: ಶಾಸಕರ ವಿರುದ್ಧ ಹಾಕಿರುವ ಎಫ್ಐಆರ್ ತಕ್ಷಣ ಹಿಂಪಡೆಯಲು ಒತ್ತಾಯ

ಉಡುಪಿ: ಕಸ್ತೂರಿ ರಂಗನ್ ವರದಿ‌ ಜಾರಿ ವಿರೋಧಿಸಿ ಮಲೆನಾಡು ಜನ ಹಿತರಕ್ಷಣ ವೇದಿಕೆ ದ.ಕ. ವತಿಯಿಂದ ಗುಂಡ್ಯ ಶಿರಾಡಿ ಬಳಿ‌ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ವಿರುದ್ಧ ರಾಜ್ಯ ಸರ್ಕಾರ ಎಫ್ ಐ ಆರ್ ದಾಖಲಿಸಿರುವುದು ಖಂಡನೀಯ.

ಪ್ರತಿಭಟಿಸುವ ಹಕ್ಕು ಎಲ್ಲರಿಗೂ ನಮ್ಮ ಸಂವಿಧಾನ ನೀಡಿದೆ. ಸರ್ಕಾರದ ಧೋರಣಿ ಖಂಡಿಸಿ ಪ್ರತಿಭಟಿಸುವವರ ವಿರುದ್ಧ ಸರ್ಕಾರ ಧಮನಕಾರಿ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಅಧ್ಯಕ್ಷ ಡಾ. ಅತುಲ್ ಕುಮಾರ್ ಶೆಟ್ಟಿ ಆಕ್ರೋಶ ಹೊರ ಹಾಕಿದ್ದಾರೆ. ಕಸ್ತೂರಿ ರಂಗನ್ ವರದಿ ವಿರುದ್ಧ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಬಾದಿತ ಗ್ರಾಮಗಳ ಸಾರ್ವಜನಿಕರು, ವಿವಿಧ ಸಂಘಟನೆಗಳ ಪ್ರಮುಖರು ಸೇರಿ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ದ.ಕ. ಜಿಲ್ಲೆ ಮುಂದಾಳತ್ವದಲ್ಲಿ ನ.15ರಂದು ಶಿರಾಡಿ ಗುಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.

ಈ ವೇಳ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತ ಹಲವರು ಪಾಲ್ಗೊಂಡಿದ್ದರು. ಕಸ್ತೂರಿ ರಂಗನ್ ವರದಿ ವಿರುದ್ಧ ಶಾಸಕರು ಸಮರ ಸಾರಿದ್ದರು. ವರದಿ ಅನುಷ್ಢಾನದಿಂದ ಕಾಡಿನಂಚಿನ ಜನವಸತಿ ಪ್ರದೇಶಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿರುವುದರ ಬಗ್ಗೆ ಗಮನ ಸೆಳೆದಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಾಸಕರು ಹಾಗೂ ಸಂಘಟಕರ ವಿರುದ್ಧ ಎಫ್ಐಆರ್ ದಾಖಲಿಸಿರುವುದು ರಾಜ್ಯ ಸರ್ಕಾರದ ಸರ್ವಾಧಿಕಾರಿ‌ ಧೋರಣೆಯನ್ನು ತೋರಿಸುತ್ತದೆ. ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕು ಸಂವಿಧಾನ ಎಲ್ಲರಿಗೂ ನೀಡಿದೆ. ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಪ್ರತಿಭಟಿಸುವುದು ತಪ್ಪೇ? ಸರ್ಕಾರ ಶಾಸಕರ ಮೇಲೆ ಹಾಕಿರುವ ಎಫ್ ಐಆರ್ ಅನ್ನು ಕೂಡಲೇ ವಾಪಸ್ ಪಡೆಯಬೇಕು. ಕಸ್ತೂರಿ ರಂಗನ್ ವರದಿ ಅನುಷ್ಠಾನ ಯಾವ ಕಾರಣಕ್ಕೂ ಆಗಬಾರದು ಮತ್ತು ಪರಿಸರ ಸೂಕ್ಷ್ಮ ಪ್ರದೇಶದ ಸ್ಪಷ್ಟತೆ, ಗಡಿರೇಖೆ ಗುರುತಿಸುವುದು ಹಾಗೂ ಕಾಡಿನಂಚಿನ ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಸರ್ಕಾರ ಮೊದಲ ಆದ್ಯತೆಯಲ್ಲಿ ಮಾಡಬೇಕು. ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ ಮಾಡಿದ ಶಾಸಕರು, ಸಂಘಟಕರ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕು ಎಂದು ಡಾ.ಅತುಲ್ ಕುಮಾರ್ ಶೆಟ್ಟಿ ಅವರು ಆಕ್ರೋಶ ಹೊರಹಾಕಿದರು.

Leave a Reply

Your email address will not be published. Required fields are marked *

error: Content is protected !!