ಕಾರ್ಕಳ: ಇಲ್ಲಿನ ಶ್ರೀವೆಂಕಟರಮಣ ದೇವರ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಈ ವೇಳೆ ನೂರಾರು ಜಾತ್ರಾ ಅಂಗಡಿ ವ್ಯಾಪಾರಸ್ಥರು ಕಾರ್ಕಳಕ್ಕೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ದೇವಾಲಯದ ರಥಬೀದಿಯಲ್ಲಿರುವ ಅಂಗಡಿ ಮಾಲೀಕರಿಗೆ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ತಮ್ಮ ಸಂಘದ ಸದಸ್ಯರಿಗೆ ಅಂಗಡಿ ನೀಡಬೇಕು ಎಂದು ಮನವಿ ಮಾಡಿರುತ್ತಾರೆ.

ಈ ಕಾರ್ಯದಲ್ಲಿ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಕೂಡ ಭಾಗಿಯಾಗಿದ್ದರು. ಧಾರ್ಮಿಕ ದತ್ತಿ ಇಲಾಖೆಯ ಅಧಿನಿಯಮದ ಪ್ರಕಾರ ಹಿಂದೂ ದೇವಸ್ಥಾನದ ಹತ್ತಿರ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವಂತಿಲ್ಲ ಎಂಬ ಆದೇಶವಿದೆ. ಅಂಗಡಿ ಮಾಲೀಕರು ಇದಕ್ಕೆ ಒಪ್ಪಿ ಎಲ್ಲಾ ಅಂಗಡಿ ಮುಂಗಟ್ಟುಗಳ ಸ್ಥಳವನ್ನು ನಿಗದಿ ಮಾಡಲಾಗಿತ್ತು. ಇದರಲ್ಲಿ ಕಾನೂನು ಬಾಹಿರ ಎನ್ನಿಸುವ ಯಾವ ಕೆಲಸವೂ ನಡೆದಿಲ್ಲ.

ಈ ನಡುವೆ ಏಕಾಏಕಿಯಾಗಿ ಪೊಲೀಸರು ಮಧ್ಯಪ್ರವೇಶ ಮಾಡಿ ನಮ್ಮ ಜಿಲ್ಲಾ ಸ್ತರದ ಕಾರ್ಯಕರ್ತರ ಮೇಲೆ ಜಾಮೀನು ರಹಿತ ಸುಮೋಟೊ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಈ ಕ್ರಮವನ್ನು ಉಡುಪಿ ಜಿಲ್ಲಾ ಹಿಂದು ಜಾಗರಣ ವೇದಿಕೆ ಬಲವಾಗಿ ಖಂಡಿಸುತ್ತದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಿಂದೂ ಸಂಘಟನೆಗಳ ದಮನ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಹಿಂದೂ ವಿರೋಧಿ ರಾಜ್ಯ ಸರ್ಕಾರವನ್ನು ಖುಷಿ ಪಡಿಸುವ ನಿಟ್ಟಿನಲ್ಲಿ ಇವರು ಈ ಹಿಂದೆಯೂ ಅನೇಕ ಹಿಂದೂ ವಿರೋಧಿ ಕ್ರಮಗಳನ್ನು ಕೈಗೊಂಡಿದ್ದು ಇದಕ್ಕೆ ಈಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.

ಹಿಂದೂ ವ್ಯಾಪಾರಸ್ಥರು ಹಿಂದುಗಳಿಗೆ ವ್ಯಾಪಾರಕ್ಕೆ ಅವಕಾಶ ಕೊಡಿ ಎನ್ನುವುದರಲ್ಲಿ ಯಾರ ಕೋಮುಭಾವನೆ ಕೆರಳುತ್ತದೆ, ಇದರಲ್ಲಿ ಯಾರ ಮೇಲೆ ದ್ವೇಷ ಹುಟ್ಟುವುದು? ಅಶಾಂತಿ ಹೇಗೆ ಸೃಷ್ಟಿ ಆಗುವುದು ಎನ್ನುವುದು ಇಲಾಖೆ ಸ್ಪಷ್ಟಪಡಿಸಬೇಕಿದೆ. ಹಿಂದೂ ದೇವಾಲಯಗಳ ಆವರಣದಲ್ಲಿ ಹಿಂದುಗಳು ವ್ಯಾಪಾರ ಮಾಡಲು ಕೂಡ ಸ್ವತಂತ್ರರಲ್ಲ ಎಂಬ ಸ್ಥಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೃಷ್ಟಿಸಿದ್ದು, ಇದರ ವಿರುದ್ಧ ಹಿಂದು ಜಾಗರಣ ವೇದಿಕೆ ಹೋರಾಟ ಕೈಗೆತ್ತಿಕೊಳ್ಳಲಿದೆ.

ಕೇವಲ ಹಿಂದೂ ಕಾರ್ಯಕರ್ತರ ಮನಸ್ಥಿತಿ ಕುಗ್ಗಿಸುವ ಯತ್ನದ ಭಾಗವಾಗಿ ಹಾಕಿರುವ ಈ ಸುಳ್ಳು ಕೇಸನ್ನು ತಕ್ಷಣ ಹಿಂಪಡೆಯಬೇಕು ಎಂದು ಅಗ್ರಹಿಸುತ್ತಿದ್ದೇವೆ. ಮುಂದಿನ ನಾಲ್ಕು ದಿನದ ಒಳಗಾಗಿ ಈ ಸುಮೊಟೊ ಕೇಸನ್ನು ಪೊಲೀಸರು ಹಿಂಪಡೆಯದೆ ಹೋದರೆ ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.

Leave a Reply

Your email address will not be published. Required fields are marked *

error: Content is protected !!