ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯ ವಶ- ಆದಿಉಡುಪಿಯ ಪ್ರಶಾಂತ್ ಸುವರ್ಣ ಬಂಧನ
ಉಡುಪಿ: ಕಾರ್ಕಳದ ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಗೋವಾ ಮದ್ಯ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಅಬಕಾರಿ ಪೊಲೀಸರು ಇಂದು ಕಾರವಾರ ಬಸ್ ನಿಲ್ದಾಣದ ಬಳಿ ಬಂಧಿಸಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಬಂಧಿತನನ್ನು ಆದಿಉಡುಪಿಯ ಪ್ರಶಾಂತ್ ಸುವರ್ಣ ಎಂದು ಗುರುತಿಸಲಾಗಿದೆ. ಈತ ಉಡುಪಿಯಿಂದ ಕಾರವಾರಕ್ಕೆ ತೆರಳುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಅಧಿಕಾರಿಗಳ ತಂಡ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದೆ.
ಆರೋಪಿಯನ್ನು ಉಡುಪಿಗೆ ಕರೆ ತಂದು ಕಾರ್ಕಳ ಜೆ.ಎಂ.ಎಫ್.ಸಿ. ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಇನ್ನೋರ್ವ ಆರೋಪಿ ಅವಿನಾಶ ಮಲ್ಲಿಯನ್ನು ಶೀಘ್ರ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಪಿ. ತಿಳಿಸಿದ್ದಾರೆ.
ಇವರು ಎರಡು ಮನೆಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾದ 15ಲಕ್ಷ ರೂ. ವೌಲ್ಯದ ಒಟ್ಟು 2360.850 ಲೀಟರ್ ವಿವಿಧ ಬ್ರಾಂಡ್ಗಳ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ನ.14ರಂದು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದರು. ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ ಪ್ರಕರಣದ ಆರೋಪಿಗಳು ಪರಾರಿಯಾಗಿ ತಲೆ ಮರೆಸಿಕೊಂಡಿದ್ದರು