ಕಾಪು: ಹಿಟ್&ರನ್- ಕಾಂಗ್ರೆಸ್ ಮುಖಂಡನ ಪುತ್ರನ ಐಶಾರಾಮಿ ಜೀಪ್‌ಗೆ ಅಮಾಯಕ ಬಲಿ
ಉಡುಪಿ: ಅತೀ ವೇಗವಾಗಿ ಬಂದ ಥಾರ್ ಜೀಪ್‌ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಾಪು ತಾಲೂಕಿನ ಬೆಳಪು ಮಿಲಿಟ್ರಿ ಕಾಲೋನಿ ಎಂಬಲ್ಲಿ ನಡೆದಿದೆ.
ಮೃತರನ್ನು ಬೆಳಪು ನಿವಾಸಿ ಮಹಮ್ಮದ್ ಹುಸೇನ್ (39) ಎಂದು ಗುರುತಿಸಲಾಗಿದೆ. ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಶೆಟ್ಟಿ ಎಂಬಾತ ನ.11ರಂದು ಮುಂಜಾನೆ 5 ಗಂಟೆಗೆ ಹಿಟ್ ಆ್ಯಂಡ್ ರನ್ ನಡೆಸಿ ಪರಾರಿಯಾಗಿದ್ದನು. ಜೀಪ್ ಡಿಕ್ಕಿ ಹೊಡೆದ ತೀವ್ರತೆಗೆ ಮಹಮ್ಮದ್ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಹುಸೇನ್ ನ.15ರಂದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ಭೀಕರತೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ನಡೆದ ಬೆನ್ನಲ್ಲೇ ಪ್ರಜ್ವಲ್ ಶೆಟ್ಟಿ ತಲೆಮರೆಸಿಕೊಂಡಿದ್ದನು. ಇದೀಗ ಆರೋಪಿಯನ್ನ ಶಿರ್ವ ಪೊಲೀಸರು ಬಂಧಿಸಿದ್ದಾರೆ. ಶಿರ್ವ ಪೊಲೀಸರು ಹಿಟ್ ಆ್ಯಂಡ್ ರನ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.