ನ.17(ನಾಳೆ) ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಉದ್ಘಾಟನೆ
ಉಡುಪಿ: ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವದ ಉದ್ಘಾಟನಾ ನ.17ರಂದು ಉಡುಪಿ ನ್ಯಾಯಾಲಯ ಆವರಣದಲ್ಲಿ ನಡೆಯಲಿದ್ದು, ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲ ಹಾಗೂ ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ.ಅಂಜಾರಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಂ.ಜಿ.ಉಮಾ, ರಾಮಚಂದ್ರ ಡಿ. ಹುದ್ದಾರ್, ಟಿ. ವೆಂಕಟೇಶ್ ನಾಯ್ಕ ಗೌರವ ಅತಿಥಿಗಳಾಗಿಯೂ, ಕರ್ನಾಟಕ ಸರ್ಕಾರದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶ್ರೀ ಕೆ. ಎಸ್. ಭರತ್ ಕುಮಾರ್ ಮತ್ತು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿರುವರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಂಟೆ 9.30ಕ್ಕೆ ಜೋಡುಕಟ್ಟೆ ಜಂಕ್ಷನ್‌ನಿಂದ ಮೆರವಣಿಗೆ ಹೊರಡಲಿದ್ದು, ಅಪರಾಹ್ನ ವಿವಿಧ ವಿಷಯಗಳ ಬಗ್ಗೆ ವಿಶೇಷ ವಿಚಾರಗೋಷ್ಠಿ ನಡೆಯಲಿದೆ ಮತ್ತು ಉಡುಪಿ, ಕುಂದಾಪುರ, ಕಾರ್ಕಳ ವಕೀಲರ ಸಂಘದ ಸದಸ್ಯರಿಂದ ಹಾಗೂ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಉಡುಪಿಯ “ಕಲಾಮಯಂ’ ತಂಡದಿಂದ ಜಾನಪದ ನೃತ್ಯ ವೈಭವ ನಡೆಯಲಿರುವುದು. ಕಾರ್ಯಕ್ರಮದಲ್ಲಿ ಸಹೋದ್ಯೋಗಿ ವಕೀಲರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಹಾಗೂ ಶತಮಾನೋತ್ತರ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ತಿಳಿಸಿರುತ್ತಾರೆ.